ದೇವನಹಳ್ಳಿ, ಜುಲೈ.06: ದೆಹಲಿಯಿಂದ ಬೆಂಗಳೂರಿಗೆ ಹಾರಬೇಕಿದ್ದ ಸ್ಪೈಸ್ಜೆಟ್ ಏರ್ಲೈನ್ಸ್ ಸಿಬ್ಬಂದಿ ಎಡವಟ್ಟಿನಿಂದಾಗಿ ಪ್ರಯಾಣಿಕರು ಹತ್ತು ಗಂಟೆಗಳ ಕಾಲ ವಿಮಾನದಲ್ಲೇ ಲಾಕ್ ಆಗಿ ಪರದಾಡುವಂತಹ ಪರಿಸ್ಥಿತಿ ನಡೆದಿದೆ.
ನಿನ್ನೆ ಸಂಜೆ ದೆಹಲಿಯಿಂದ ಬೆಂಗಳೂರಿಗೆ ಹೋಗುವ SG 8151ನ ಸ್ಪೈಸ್ಜೆಟ್ ಏರ್ಲೈನ್ಸ್ ವಿಮಾನವನ್ನು ಏರಿದ ಸುಮಾರು 60 ಪ್ರಯಾಣಿಕರು ಸತತ 12 ಗಂಟೆಗಳಿಗೂ ಅಧಿಕ ಕಾಲ ವಿಮಾನದೊಳಗೆ ಲಾಕ್ ಆಗಿ ಪರದಾಡಿದ್ದಾರೆ. ತಾಂತ್ರಿಕ ದೋಷ ಎಂದು ನಿನ್ನೆ ಸಂಜೆಯಿಂದ ಬೆಳಗ್ಗೆ ವರೆಗೂ ದೆಹಲಿ ಏರ್ಪೋಟ್ನಲ್ಲೆ ಫ್ಲೈಟ್ ನಿಲ್ಲಿಸಲಾಗಿದ್ದು ಪ್ರಯಾಣಿಕರನ್ನು ಹೊರಗೆ ಬಿಡದೆ ಸಿಬ್ಬಂದಿ ಎಡವಟ್ಟು ಮಾಡಿದ್ದಾರೆ.
ಅಲ್ಲದೆ ಪ್ರಯಾಣಿಕರಿಗೆ ಊಟ, ತಿಂಡಿ ವ್ಯವಸ್ಥೆಯೂ ಮಾಡದೆ ಫ್ಲೈಟ್ನಲ್ಲೇ ಕೂರಿಸಿದ್ದಾರೆ. ಆಚೆಯೂ ಹೋಗಲಾಗದೆ ಒಳಗೂ ಇರಲಾಗದೆ ಪರದಾಡುತ್ತಿರುವ ಪ್ರಯಾಣಿಕರು ಆಕ್ರೋಶ ಹೊರ ಹಾಕಿದ್ದಾರೆ.
ಸ್ಪೈಸ್ಜೆಟ್ ಏರ್ಲೈನ್ಸ್ ವಿಮಾನ ನಿನ್ನೆ ರಾತ್ರಿ 7.40ಕ್ಕೆ ದೆಹಲಿಯ ಟರ್ಮಿನಲ್ 3 ಯಿಂದ ಟೇಕಾಫ್ ಆಗಬೇಕಿತ್ತು. ಆದರೆ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆ ಟೇಕಾಫ್ ಆಗಿಲ್ಲ. ಬೆಳಗಿನ ಜಾವ 7 ಗಂಟೆಯಾದರೂ ವಿಮಾನ ದೆಹಲಿಯಿಂದ ಹೊರಡಿಲ್ಲ. ಆದಷ್ಟು ಬೇಗ ಟೇಕಾಫ್ ಮಾಡ್ತೀವಿ ಎಂದು ಸಿಬ್ಬಂದಿ ತಿಳಿಸಿದ್ದಾರೆ.