ಮುಡಾ ಅಕ್ರಮ ಸರ್ಕಾರಕ್ಕೆ ವ್ಯವಸ್ಥಿತ ಮೋಸ : ಬಿಜೆಪಿ ಎಂಎಲ್​ಸಿ ಸಿಟಿ ರವಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ

Ravi Talawar
ಮುಡಾ ಅಕ್ರಮ ಸರ್ಕಾರಕ್ಕೆ ವ್ಯವಸ್ಥಿತ ಮೋಸ : ಬಿಜೆಪಿ ಎಂಎಲ್​ಸಿ ಸಿಟಿ ರವಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ
WhatsApp Group Join Now
Telegram Group Join Now

ಬೆಂಗಳೂರು, ಜುಲೈ 4: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮ ಆರೋಪ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಎಂಎಲ್​ಸಿ ಸಿಟಿ ರವಿ ವಾಗ್ದಾಳಿ ನಡೆಸಿದ್ದಾರೆ. ಮುಖ್ಯಮಂತ್ರಿಗಳ ಬಟ್ಟೆ ಮಾತ್ರ ಪರಿಶುದ್ಧವಾಗಿದ್ದರೆ ಸಾಕಾ ಎಂದು ಅವರು ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ರವಿ, ಭೂಮಿ ವಶಪಡಿಸಿಕೊಳ್ಳಬೆಕಾದರೆ 50:50 ನಿವೇಶನ ಕೊಡಬೇಕಾಗುತ್ತದೆ. ಸರ್ಕಾರಕ್ಕೆ ಮೋಸ ಮಾಡಬೇಕೆಂದೇ ವ್ಯವಸ್ಥಿತವಾಗಿ ಮಾಡಿದ್ದಾರೆ ಎಂದು ಟೀಕಿಸಿದರು.

ಮೋಸ ಮಾಡಿರುವವರು ಸಿಎಂ ಸಿದ್ದರಾಮಯ್ಯಗೆ ಹತ್ತಿರವಾಗಿರುವವರು. ಅದಕ್ಕೆ ಸಿಎಂ ರಾಜೀನಾಮೆ ಕೊಡಬೇಕು ಎಂದು ಅವರು ಆಗ್ರಹಿಸಿದರು. ಸಿಎಂ ತವರು ಜಿಲ್ಲೆಯಲ್ಲಿಯೇ ಸಾವಿರಾರು ಕೋಟಿ ಅಕ್ರಮ ಆಗಿದೆ. ಸಿಎಂ ಸಿದ್ದರಾಮಯ್ಯನವರು ತಮ್ಮ ಪರಿಶುದ್ಧತೆಯನ್ನು ಸಾಬೀತುಪಡಿಸಲು ರಾಜೀನಾಮೆ ಕೊಡಬೇಕು ಎಂದ ಸಿಟಿ ರವಿ, ದಾಖಲೆ‌ ಇಟ್ಟು ಭ್ರಷ್ಟಾಚಾರ ಜನರ ಮುಂದೆ ಬಯಲಿಗೆಳೆಯುತ್ತೇವೆ ಎಂದರು.

ಭ್ರಷ್ಟಾಚಾರ ಯಾರ ಅವಧಿಯಲ್ಲಿ ಆಗಿದ್ದರೂ ಕ್ರಮ ಕೈಗೊಳ್ಳಿ. ಬಿಜೆಪಿ ಕಾಲದಲ್ಲಿ ಅಕ್ರಮ ಆಗಿದ್ದರೂ ಕ್ರಮ‌ ತೆಗೆದುಕೊಳ್ಳಿ ಎಂದು ರವಿ ಆಗ್ರಹಿಸಿದರು. ಮುಡಾ ಅಕ್ರಮದ ತನಿಖೆ ಸಿಬಿಐಗೆ ವಹಿಸಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್​ ಸ್ಪಷ್ಟಪಡಿಸಿದ್ದಾರೆ. ಅಕ್ರಮದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂಬ ಬಿಜೆಪಿ ಆಗ್ರಹದ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಕೇಳುತ್ತಾರೆ ಎಂದು ಎಲ್ಲವನ್ನೂ ಸಿಬಿಐಗೆ ಕೊಡಲು ಆಗಲ್ಲ ಎಂದರು.

ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಬಿಜೆಪಿ ಆಗ್ರಹದ ಬಗ್ಗೆ ಪ್ರತಿಕ್ರಿಯಿಸಿ, ಸಿಎಂ ಈಗಾಗಲೇ ಸ್ಪಷ್ಟನೆ ಕೊಟ್ಟಿದ್ದಾರೆ. ಎಲ್ಲವನ್ನೂ ಸಿಬಿಐ ತನಿಖೆಗೆ ಕೊಟ್ಟರೆ ಇಲ್ಲೇನು ಮಾಡುವ ಹಾಗಿಲ್ಲವೇ? ಸದನದಲ್ಲಿ ಯಾವ ವಿಷಯ ಚರ್ಚೆಗೆ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ. ಸ್ಪೀಕರ್​ಗೆ ಯಾವ ವಿಚಾರದ ಬಗ್ಗೆ ಪತ್ರ ಕೊಡ್ತಾರೋ ನೋಡೋಣ. ಬಿಜೆಪಿಯವರಿಗೆ ನಾವು ಉತ್ತರ ಕೊಡುತ್ತೇವೆ, ಹಿಂಜರಿಯುವುದಿಲ್ಲ ಎಂದರು.

 

WhatsApp Group Join Now
Telegram Group Join Now
Share This Article