ಬೆಂಗಳೂರು: ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಡಿ ಬಂಧಿತರಾಗಿರುವ ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಅವರ ಎಸ್ಐಟಿ ಕಸ್ಟಡಿ ಇಂದು ಅಂತ್ಯವಾಗಲಿದೆ. ಎರಡು ಬಾರಿ ಕಸ್ಟಡಿಗೆ ಪಡೆದಿರುವ ಎಸ್ಐಟಿ ಅಧಿಕಾರಿಗಳು, ಇಂದು ಮಧ್ಯಾಹ್ನ ಆರೋಪಿಯನ್ನು ನ್ಯಾಯಾಧೀಶರೆದುರು ಹಾಜರುಪಡಿಸಲಿದ್ದಾರೆ. ಹೆಚ್ಚುವರಿ ಕಸ್ಟಡಿಗೆ ಕೇಳುವ ಸಾಧ್ಯತೆ ಇಲ್ಲ ಎಂದು ತಿಳಿದುಬಂದಿದೆ.
ಜೂನ್ 23ರಂದು ಸೂರಜ್ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದ ಎಸ್ಐಟಿ, ಏಳು ದಿನಗಳ ಕಾಲ ಕಸ್ಟಡಿಗೆ ಪಡೆದಿತ್ತು. ಮಹಜರು ಸಂದರ್ಭದಲ್ಲಿ ಆರೋಪಿಯ ಮೂಲ ಮೊಬೈಲ್ ಫೋನ್ ಹಾಗೂ ಕೆಲವು ಕೂದಲಿನ ಮಾದರಿ ದೊರೆತಿರುವುದರಿಂದ, ಸೂರಜ್ ಅವರ ಧ್ವನಿ ಹಾಗೂ ಕೂದಲ ಮಾದರಿ ಪಡೆಯಬೇಕಿದೆ. ಹಾಗಾಗಿ, ಸೂರಜ್ ಕಸ್ಟಡಿಯನ್ನು 4 ದಿನಗಳ ಕಾಲ ವಿಸ್ತರಿಸುವಂತೆ ಎಸ್ಐಟಿ ಅಧಿಕಾರಿಗಳು ಮನವಿ ಸಲ್ಲಿಸಿದ್ದರು. ಆದರೆ ಕಸ್ಟಡಿ ಅವಧಿಯನ್ನು 2 ದಿನಗಳಿಗೆ ವಿಸ್ತರಿಸಿ, ಜುಲೈ 1ರಂದು ನ್ಯಾಯಾಲಯ ಆದೇಶಿಸಿತ್ತು.