ಗುವಾಹಟಿ(ಅಸ್ಸಾಂ): ಅಸ್ಸಾಂ ಪ್ರವಾಹಕ್ಕೆ ಈಗಾಗಲೇ 38 ಮಂದಿ ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಗಳಲ್ಲಿ ಮೂವರು ನೆರೆ ನೀರಿನಲ್ಲಿ ಮುಳುಗಿ ಅಸುನೀಗಿದ್ದಾರೆ. ರಾಜ್ಯ ಪ್ರಕೃತಿ ವಿಕೋಪ ನಿರ್ವಹಣೆ ಪ್ರಾಧಿಕಾರದ ವರದಿ ಪ್ರಕಾರ, ತಿನ್ಸುಕಿಯಾ ಮತ್ತು ಧೆಮಾಜಿ ಜಿಲ್ಲೆಯಲ್ಲಿ ತಲಾ ಒಬ್ಬೊಬ್ಬರು ನೀರಿನಲ್ಲಿ ಮಳುಗಿ ಪ್ರಾಣ ಕಳೆದುಕೊಂಡಿದ್ದಾರೆ.
ರಾಜ್ಯದ ಪ್ರವಾಹ ಪರಿಸ್ಥಿತಿ ಮಂಗಳವಾರ ಮತ್ತಷ್ಟು ಗಂಭೀರ ಸ್ವರೂಪ ಪಡೆಯಿತು. ಈಗಾಗಲೇ 28 ಜಿಲ್ಲೆಗಳಲ್ಲಿ ಅಂದಾಜು 11.34 ಲಕ್ಷ ಜನರು ತೊಂದರೆಗೊಳಗಾಗಿದ್ದಾರೆ. ಕಮ್ರೂಪ್, ತಮಲ್ಪುರ್, ಮೋರಿಗಾಂವ್, ಲಖೀಂಪುರ್, ಬಿಸ್ವನಾಥ್, ದೀಬ್ರುಘರ್, ಕರೀಂಗಂಜ್, ಉಡಲ್ಗುರಿ, ನಾವಾಂವ್, ಸೋನಿಟ್ಪುರ್ ಗೋಲಾಘಾಟ್, ನಲ್ಬರಿ ಹಾಗು ಜೋರಾಹಟ್ ಸೇರಿದಂತೆ ಹಲವು ಜಿಲ್ಲೆಗಳನ್ನು ಪ್ರವಾಹ ಆವರಿಸಿಕೊಂಡಿದೆ.
ಪ್ರವಾಹದ ನೀರಿಗೆ 42,476.18 ಹೆಕ್ಟೇರ್ ಕೃಷಿ ಭೂಮಿ ಮುಳುಗಿದೆ. 88 ಕಂದಾಯ ವೃತ್ತಗಳ 2,208 ಗ್ರಾಮಗಳು ಎರಡನೇ ಅಲೆಯ ಪ್ರವಾಹದಿಂದ ತತ್ತರಿಸಿವೆ. ಬ್ರಹ್ಮಪುತ್ರಾ ನದಿ ನೀಮಾಟಿಘಾಟ್, ತೇಜ್ಪುರ್, ಗುವಾಹಟಿ ಮತ್ತು ದುಬ್ರಿ ಎಂಬಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಅದೇ ರೀತಿ ಸುಬಾನ್ಸಿರಿ ನದಿ ಕೂಡಾ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಕ್ಷಣ ಕ್ಷಣಕ್ಕೂ ನದಿ ಪಾತ್ರದ ಜನರ ಆತಂಕ ಹೆಚ್ಚಿಸುತ್ತಿದೆ.
ಪ್ರವಾಹಪೀಡಿತ ಜಿಲ್ಲೆಗಳಲ್ಲಿ ಸಂಕಷ್ಟದಲ್ಲಿರುವ ಜನರ ನೆರವಿಗಾಗಿ ಸರ್ಕಾರ 489 ಪರಿಹಾರ ಕೇಂದ್ರಗಳನ್ನು ತೆರೆದಿದ್ದು, ಇವುಗಳಲ್ಲಿ 2.87 ಲಕ್ಷ ಜನರು ಆಶ್ರಯ ಪಡೆದಿದ್ದಾರೆ. ಭೀಕರ ನೆರೆಯಿಂದಾಗಿ ಮಂಗಳವಾರ ಒಂದೇ ದಿನ 74 ರಸ್ತೆಗಳು, 6 ಸೇತುವೆಗಳು ಕೊಚ್ಚಿಹೋಗಿವೆ. ಇನ್ನೊಂದೆಡೆ, ಪ್ರವಾಹಪೀಡಿತರ ರಕ್ಷಣಾ ಕಾರ್ಯಾಚರಣೆ ನಿರಂತರವಾಗಿ ಸಾಗಿದೆ.