ಬೆಂಗಳೂರು: ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನವನ್ನು ಜುಲೈ 15ರಿಂದ ಜುಲೈ 26ರವರೆಗೆ 10 ದಿನಗಳ ಕಾಲ ಕರೆಯಲು ಸರ್ಕಾರ ನಿರ್ಧರಿಸಿದೆ. ಈ ಕುರಿತು ರಾಜ್ಯಪಾಲರಿಗೆ ಶಿಫಾರಸು ಮಾಡಲಾಗಿದೆ.
ಜೂ.20ರಂದು ನಡೆದ ಸಚಿವ ಸಂಪುಟದ ಸಭೆಯಲ್ಲಿ ಅಧಿವೇಶನದ ದಿನಾಂಕ ಅಂತಿಮಗೊಳಿಸಲು ಮುಖ್ಯಮಂತ್ರಿಗೆ ಅಧಿಕಾರ ನೀಡಲಾಗಿತ್ತು.
ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಆಡಳಿತದ ಲೋಪಗಳನ್ನು ಎತ್ತಿ ತೋರಿಸುವ ಮೂಲಕ ಸರ್ಕಾರ ಮೇಲೆ ಮುಗಿಬೀಳುವ ಸಾಧ್ಯತೆ ಇದೆ. ಅದರಲ್ಲೂ ಮುಖ್ಯವಾಗಿ ಪೆಟ್ರೋಲ್, ಡೀಸೆಲ್, ಹಾಲಿನ ಬೆಲೆ ಏರಿಕೆ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ಹಗರಣ, ಮೈಸೂರು ಮುಡಾದಲ್ಲಿನ ಹಗರಣಗಳನ್ನು ಇಟ್ಟುಕೊಂಡು ಸರ್ಕಾರವನ್ನು ಕಟ್ಟಿ ಹಾಕುವ ಪ್ರಯತ್ನ ನಡೆಸಲಿವೆ.