ನಾನು ಜಾತಿ ನೋಡಿ ಜನಸೇವೆ ಮಾಡಿಲ್ಲ, ನೀತಿ ನೋಡಿ ಕೆಲಸ ಮಾಡಿದ್ದೇನೆ: ಡಿಸಿಎಂ ಡಿ.ಕೆ. ಶಿವಕುಮಾರ್

Ravi Talawar
ನಾನು ಜಾತಿ ನೋಡಿ ಜನಸೇವೆ ಮಾಡಿಲ್ಲ, ನೀತಿ ನೋಡಿ ಕೆಲಸ ಮಾಡಿದ್ದೇನೆ: ಡಿಸಿಎಂ ಡಿ.ಕೆ. ಶಿವಕುಮಾರ್
WhatsApp Group Join Now
Telegram Group Join Now

ರಾಮನಗರ: ”ಚನ್ನಪಟ್ಟಣಕ್ಕೆ ಶಾಸಕರು ಇಲ್ಲದ ಕಾರಣ, ಈಗ ನಾನೇ ನಿಮ್ಮ ಮನೆ ಮಗ, ನಾನೇ ಸೇವಕ, ನಾನೇ ಶಾಸಕ, ನಾನೇ ಮಂತ್ರಿ, ನಾನೇ ಡಿಸಿಎಂ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಚನ್ನಪಟ್ಟಣ ತಾಲೂಕಿನ ವಿರುಪಾಕ್ಷಿ ಪುರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಅರಳಾಳುಸಂದ್ರದ ಶಾಲಾ ಆವರಣದಲ್ಲಿ ಸೋಮವಾರ ನಡೆದ ‘ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ”ಜನರ ಸೇವೆ ಮಾಡಲು ಉಪಮುಖ್ಯಮಂತ್ರಿಯಾಗಿ ನಿಮ್ಮ ಮುಂದೆ ಬಂದಿದ್ದೇನೆ. ಜನಸೇವೆ ಮಾಡಲು ಮೊದಲು ಅವಕಾಶ ನೀಡಿದವರು ಚನ್ನಪಟ್ಟಣದ ಮತದಾರರು. ನಾನು ಜಾತಿ ನೋಡಿ ಜನಸೇವೆ ಮಾಡಿಲ್ಲ. ನೀತಿ ನೋಡಿ ಕೆಲಸ ಮಾಡಿದ್ದೇನೆ” ಎಂದರು.

‘ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ (ETV Bharat)

”ನಿಮ್ಮ ಮನೆ ಬಾಗಿಲಿಗೆ ಅವಕಾಶ ಬಂದಿದೆ. ಯಾವುದೇ ಕಾರಣಕ್ಕೂ ಬಿಡಲು ಹೋಗಬೇಡಿ. ನಿಮ್ಮ ಮನೆ ಬಾಗಿಲಿಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಬಂದಿದ್ದಾರೆ. ನೀವು ನನ್ನ ಸೇವೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು. ನಿಮ್ಮ ಸೇವೆಗೆ ನನ್ನ ಕಚೇರಿ ಸದಾ ತೆರೆದಿರುತ್ತದೆ. ನನ್ನ ಕಚೇರಿಗೆ ಬಂದು ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು” ಎಂದ ಅವರು, ”ಈ ಹಿಂದೆ ಇಂಧನ ಸಚಿವನಾಗಿದ್ದಾಗ ರೈತರಿಗೆ ಟ್ರಾನ್ಸ್​ಫಾರ್ಮರ್ ಅಳವಡಿಕೆ ಮತ್ತು ನೀರಾವರಿ ಕೆಲಸಗಳನ್ನು ಮಾಡಿ ಅನುಕೂಲ ಮಾಡಿಕೊಡಲಾಗಿತ್ತು. ಕ್ಷೇತ್ರ ವಿಂಗಡಣೆಯಾಗಿ ನಾನು ಕನಕಪುರಕ್ಕೆ ಹೋದ ನಂತರ ಯಾರಾದರೂ ಶಾಸಕರು ಹೀಗೆ ಜನರ ಬಳಿಗೆ ಬಂದು ಕೆಲಸ ಮಾಡಿದ ಉದಾಹರಣೆಯೇ ಇಲ್ಲ. ದಳ, ಬಿಜೆಪಿ ಯಾವ ಪಕ್ಷದವರನ್ನು ಪ್ರಶ್ನೆ ಮಾಡಲು ಹೋಗುವುದಿಲ್ಲ” ಎಂದು ಹೇಳಿದರು.

”ನಾನು ಯಾರ ಜೊತೆಗೂ ಸ್ಪರ್ಧಿಸಲು ಇಲ್ಲಿಗೆ ಬಂದಿಲ್ಲ. ನಿಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಬಂದಿದ್ದೇನೆ. ಲೋಕಸಭಾ ಚುನಾವಣೆಯಲ್ಲಿ ನಮ್ಮ ನಿರೀಕ್ಷೆಗೂ ಮೀರಿ ಮತ ನೀಡಿದ್ದೀರಿ. ಅದಕ್ಕಾಗಿ ನಿಮಗೆ ಕೃತಜ್ಞತೆ ಸಲ್ಲಿಸಲು ಬಂದಿದ್ದೇನೆ. 80 ಸಾವಿರ ಮತಗಳನ್ನು ನೀಡಿದ ನಿಮಗೆ ಕೋಟಿ ನಮಸ್ಕಾರಗಳು” ಎಂದರು.

WhatsApp Group Join Now
Telegram Group Join Now
Share This Article