ಬೆಂಗಳೂರು, ಜುಲೈ 1: ಬೆಂಗಳೂರು ಹಾಗೂ ಅಬುಧಾಬಿ ಮಧ್ಯೆ ಆಗಸ್ಟ್ 1ರಿಂದ ನೇರ ವಿಮಾನ ಸೇವೆ ಆರಂಭಿಸುವುದಾಗಿ ಇಂಡಿಗೋ ಏರ್ಲೈನ್ಸ್ ತಿಳಿಸಿದೆ. ವಾರದಲ್ಲಿ ಆರು ಬಾರಿ ಬೆಂಗಳೂರು ಅಬುಧಾಬಿ ವಿಮಾನಗಳು ಕಾರ್ಯನಿರ್ವಹಿಸಲಿವೆ. ಇದರೊಂದಿಗೆ ಭಾರತದ ವಿವಿಧ ನಗರಗಳಿಂದ ಅಬುಧಾಬಿಗೆ ತೆರಳುವ ಇಂಡಿಗೋ ವಿಮಾನಗಳ ಸಂಖ್ಯೆ 75 ಕ್ಕೆ ತಲುಪಿದೆ. ಹೊಸ ವಿಮಾನ ಸೇವೆಯು ಯುನೈಟೆಡ್ ಅರಬ್ ಎಮಿರೇಟ್ಸ್ ರಾಜಧಾನಿಗೆ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಇಂಡಿಗೋ ತಿಳಿಸಿದೆ.
ಅಬುಧಾಬಿಯಿಂದ ನೇರ ವಿಮಾನ ಸೇವೆ ಒದಗಿಸಲಾಗುತ್ತಿರುವ ಭಾರnತೀಯ ನಗರಗಳಲ್ಲಿ ಬೆಂಗಳೂರು 10 ನೇಯದ್ದಾಗಿದೆ ಎಂದು ಇಂಡಿಗೋದ ಜಾಗತಿಕ ಮಾರಾಟದ ಮುಖ್ಯಸ್ಥ ವಿನಯ್ ಮಲ್ಹೋತ್ರಾ ತಿಳಿಸಿದ್ದಾರೆ. ಬೆಂಗಳೂರಿನ ವಿಮಾನ ಸೇರ್ಪಡೆಯೊಂದಿಗೆ, ಅಬುಧಾಬಿಗೆ ವಾರದಲ್ಲಿ 75 ಮತ್ತು ಯುಎಇಗೆ 220 ಕ್ಕೂ ಹೆಚ್ಚು ವಿಮಾನಗಳು ಸಂಚರಿಸಲಿವೆ ಎಂದು ಅವರು ಹೇಳಿದ್ದಾರೆ.
ಇಂಡಿಗೋ ವಿಮಾನ ಸಂಖ್ಯೆ 6E 1438 ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಂಗಳವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ರಾತ್ರಿ 9.25 ಕ್ಕೆ ಹೊರಟು ರಾತ್ರಿ 11.30 ಕ್ಕೆ ಅಬುಧಾಬಿ ತಲುಪಲಿದೆ. ಅಬುಧಾಬಿಯಿಂದ, ವಿಮಾನ ಸಂಖ್ಯೆ 6E 1439 ಬುಧವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ (ಆಗಸ್ಟ್ 2 ರಿಂದ) 12.30 ಕ್ಕೆ ಹೊರಟು ಬೆಳಗ್ಗೆ 5.45ಕ್ಕೆ ವಿಮಾನ ಬೆಂಗಳೂರು ತಲುಪಲಿದೆ.