ನವದೆಹಲಿ, ಜೂನ್ 29: ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ರಾಜ್ಯದ ಪೊಲೀಸ್ ಪಡೆಯ ಬಲವರ್ಧನೆಗೆ ಸಂಬಂಧಿಸಿದ ವಿವಿಧ ಪ್ರಸ್ತಾವನೆಗಳ ಮಂಜೂರಾತಿ ಕುರಿತಂತೆ ಗಮನ ಸೆಳೆದರು. ಕರ್ನಾಟಕ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡಲು ಮತ್ತು ಸಾರ್ವಜನಿಕರ ಸುರಕ್ಷತೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರದಿಂದ ಅಗತ್ಯವಿರುವ ನೆರವಿನ ಕುರಿತ ಹಲವು ಪ್ರಸ್ತಾವನೆಗಳಿಗೆ ಅನುಮೋದನೆ ನೀಡುವಂತೆ ಮನವಿ ಮಾಡಿದರು.
ಭಾರತ ಸರ್ಕಾರವು 80 ಕೋಟಿ ರೂ. ವೆಚ್ಚದಲ್ಲಿ ಇಂಡಿಯಾ ರಿವರ್ಸ್ ಬೆಟಾಲಿಯನ್ ಸ್ಥಾಪನೆಗೆ ಅನುಮೋದನೆ ನೀಡಿದ್ದು, ಹೆಚ್ಚುವರಿಯಾಗಿ ಬಳ್ಳಾರಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಎರಡು ಬೆಟಾಲಿಯನ್ ಸ್ಥಾಪನೆಗೆ ಅನುಮೋದನೆ ನೀಡುವಂತೆ ಕೋರಿದರು.
ನಿರ್ಭಯಾ ನಿಧಿಯಡಿಯಲ್ಲಿ ಬೆಂಗಳೂರು ನಗರದಂತೆಯೇ ಮೈಸೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮಂಗಳೂರು ಹಾಗೂ ಕಲಬುರಗಿ ನಗರಗಳಲ್ಲಿ ಸೇಫ್ ಸಿಟಿ ಯೋಜನೆಯನ್ನು ತಲಾ 200 ಕೋಟಿ ರೂ. ಗಳಂತೆ ಒಟ್ಟು 1000 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಕ್ಕೆ ಅನುಮೋದನೆ ನೀಡಬೇಕೆಂದು ಶಾ ಬಳಿ ಸಿದ್ದರಾಮಯ್ಯ ಆಗ್ರಹಿಸಿದರು.