ಬೆಳಗಾವಿ, ಜೂನ್ 29: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ, ಪ್ರತಿ ಮನೆಯ ಯಜಮಾನಿಯ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 2,000 ರೂ. ವರ್ಗಾವಣೆ ಮಾಡುವ ಗೃಹಲಕ್ಷ್ಮಿ ಯೋಜನೆ ಬಗ್ಗೆ ಕಳೆದ ಕೆಲವು ದಿನಗಳಿಂದ ಭಾರಿ ಚರ್ಚೆಯಾಗುತ್ತಿತ್ತು. ಯೋಜನೆಯ ಹಣ ಖಾತೆಗಳಿಗೆ ಬರುತ್ತಿಲ್ಲ ಎಂದು ಮಹಿಳೆಯರು ಅಲವತ್ತುಕೊಳ್ಳುತ್ತಿದ್ದರು. ಆದರೆ, ಇದೀಗ ಆ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ. ಬೆಳಗಾವಿಯಲ್ಲಿ ‘ಟಿವಿ9’ಗೆ ಹೇಳಿಕೆ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಗೃಹಲಕ್ಷ್ಮಿ ಹಣವನ್ನು ಮೇ 1ರಂದು ಕೊಟ್ಟಿದ್ದೆವು. ಜೂನ್ ತಿಂಗಳ ಹಣ ಈಗಾಗಲೇ ಟ್ರೆಷರಿಗೆ ಹಾಕಿದ್ದೇವೆ ಇಡೀ ರಾಜ್ಯದಲ್ಲಿ ಇವತ್ತು ಮತ್ತು ನಾಳೆ ನಾಳೆ ಕ್ರೆಡಿಟ್ ಆಗಲಿದೆ ಎಂದಿದ್ದಾರೆ.
ಯಾವುದೇ ಸಂದರ್ಭದಲ್ಲಿ ಐದು ಗ್ಯಾರಂಟಿಗಳನ್ನು ನಿಲ್ಲಿಸುವುದಿಲ್ಲ. ಬಿಜೆಪಿಯವರಿಗೆ ಮಾಡಲು ಕೆಲಸ ಇಲ್ಲ, ವಿನಾ ಕಾರಣ ಆರೋಪ ಮಾಡುತ್ತಿದ್ದಾರೆ. ಅಧಿಕಾರ ಕೊಟ್ಟಾಗ ನಲವತ್ತು ಪರ್ಸಂಟ್ ಕಮಿಷನ್ ತೆಗೆದುಕೊಂಡು ಮನೆಯಲ್ಲಿ ಕುಳಿತರು ಎಂದು ಟೀಕಿಸಿದರು.
ಎರಡು ಸಾವಿರ ರೂಪಾಯಿ ಕೊಟ್ಟು ನಾಲ್ಕು ಸಾವಿರ ರೂಪಾಯಿ ಕಸಿದುಕೊಳ್ತಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿ, ಬಿಜೆಪಿಯವರಿಗೆ ನಾವು ಅಭಿನಂದನೆ ಸಲ್ಲಿಸುತ್ತೇವೆ. ಪೆಟ್ರೋಲ್ ದರ ಏರಿಕೆ ಆಗಿದೆ ಎಂದು ಹೇಳಿದ್ದಾರೆ. ಇದೇ ಬಿಜೆಪಿ ಅಧಿಕಾರದಲ್ಲಿ ಇದ್ದಾಗಲೇ ಪೆಟ್ರೋಲ್ ದರವನ್ನು ನೂರು ರೂಪಾಯಿ ತಗೊಂಡು ಹೋಗಿದ್ದರು. ನಲವತ್ತು ರೂಪಾಯಿ ಪೆಟ್ರೋಲ್ ದರ ಏರಿಸಿದ್ದ ಶ್ರೇಯಸ್ಸು ಪ್ರಧಾನಿ ಮೋದಿಯವರಿಗೆ ಹೋಗುತ್ತದೆ ಎಂದು ಟೀಕಿಸಿದರು.