ನವದೆಹಲಿ, ಜೂನ್ 25: ಆರ್ಬಿಐನಿಂದ ನಿರ್ಬಂಧಕ್ಕೆ ಒಳಗಾಗಿರುವ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಸಂಸ್ಥೆ ತನ್ನಲ್ಲಿರುವ ನಿಷ್ಕ್ರಿಯ ಖಾತೆಗಳನ್ನು ಮುಚ್ಚುತ್ತಿದೆ. ಈ ನಿಟ್ಟಿನಲ್ಲಿ ಕಳೆದ ಒಂದು ವರ್ಷದಿಂದ ಯಾವುದೇ ವಹಿವಾಟು ಕಾಣದ ಹಾಗೂ ಶೂನ್ಯ ಬ್ಯಾಲನ್ಸ್ ಇರುವ ವ್ಯಾಲಟ್ಗಳನ್ನುಬಂದ್ ಮಾಡಲಿದೆ. ಜುಲೈ 19ರಂದು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಈ ಸಂಬಂಧ ಪ್ರಕಟಣೆ ಹೊರಡಿಸಿದೆ. 2024ರ ಜುಲೈ 20ಕ್ಕೆ ಈ ವ್ಯಾಲಟ್ಗಳು ಅಸ್ತಿತ್ವದಲ್ಲಿ ಇರುವುದಿಲ್ಲ.
ಪೇಟಿಎಂ ಆ್ಯಪ್ನಲ್ಲಿ ಇರುವ ವ್ಯಾಲಟ್ಗೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ನ ಖಾತೆಯನ್ನು ಬಳಸಲಾಗುತ್ತಿತ್ತು. ಪಿಪಿಬಿಎಲ್ ಅನ್ನು ಆರ್ಬಿಐ ನಿರ್ಬಂಧಿಸಿದ್ದರಿಂದ ವ್ಯಾಲಟ್ ಕೂಡ ನಿರ್ಬಂಧಿತವಾಗಿದೆ. ಪಿಪಿಬಿಎಲ್ ಅಕೌಂಟ್ಗೆ ಹೇಗೆ ಹಣ ಡೆಪಾಸಿಟ್ ಇಡಲು ಆಗುವುದಿಲ್ಲವೋ, ವ್ಯಾಲಟ್ಗೂ ಹಣ ಜಮೆ ಮಾಡಲು ಆಗುವುದಿಲ್ಲ.
ಈ ಮೊದಲೇ ವ್ಯಾಲಟ್ನಲ್ಲಿ ಹಣ ಇದ್ದರೆ ಅದನ್ನು ಅನಿರ್ಬಂಧಿತವಾಗಿ ಬಳಸಬಹುದು. ನಿಮ್ಮ ಬ್ಯಾಂಕ್ ಖಾತೆಗೆ ಆ ಹಣ ವರ್ಗಾಯಿಸಬಹುದು. ಅಥವಾ ಪೇಮೆಂಟ್ ಮಾಡಬಹುದು. ನೀವು ಅದನ್ನು ಪೂರ್ಣವಾಗಿ ಖಾಲಿ ಮಾಡುವವರೆಗೂ ಆ ವ್ಯಾಲಟ್ ಅಸ್ತಿತ್ವದಲ್ಲಿ ಇರುತ್ತದೆ.
ಈಗ ಕಳೆದ ಒಂದು ವರ್ಷದಿಂದ ಶೂನ್ಯ ಬ್ಯಾಲನ್ಸ್ನಲ್ಲಿ ಇರುವ ವ್ಯಾಲಟ್ಗಳನ್ನು ಮಾತ್ರವೇ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮುಚ್ಚುತ್ತಿದೆ. ಹೀಗಾಗಿ, ಯಾವ ಪೇಟಿಎಂ ಬಳಕೆದಾರರು ಚಿಂತೆ ಪಡುವ ಅಗತ್ಯ ಇಲ್ಲ. ನೀವೇ ಸ್ವತಃ ವ್ಯಾಲಟ್ ಮುಚ್ಚಲು ಅವಕಾಶ ಇದೆ.