ಕಲಬುರಗಿ, ಜೂನ್ 24: ಕಲಬುರಗಿ ವಿಮಾನ ನಿಲ್ದಾಣವನ್ನುಸ್ಫೋಟಿಸುವುದಾಗಿ ಅನಾಮಧೇಯ ವ್ಯಕ್ತಿಯಿಂದ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ. ವಿಚಾರ ತಿಳಿದು ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ, ಪೊಲೀಸರ ದೌಡಾಯಿಸಿದ್ದಾರೆ. ವಿಮಾನ ನಿಲ್ದಾಣದ ಎಲ್ಲ ಸ್ಥಳಗಳಲ್ಲಿ ಮತ್ತು ಪ್ರಯಾಣಿಕರ ಬ್ಯಾಗ್ಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದರು. ಬಾಂಬ್ ಬೆದರಿಕೆ ಮೇಲ್ ಬಂದ ಸಂದರ್ಭದಲ್ಲಿ ಕಂದಾಯ ಸಚಿವ ಕೃಷ್ಣಭೈರೇಗೌಡ ವಿಮಾನ ನಿಲ್ದಾಣದಲ್ಲಿದ್ದರು.
ಬಾಂಬ್ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಸಿಬ್ಬಂದಿ ಪ್ರಯಾಣಿಕರನ್ನು ಹೊರಗೆ ಬಿಡಲಿಲ್ಲ. ನನಗೂ ಅರ್ಧ ಗಂಟೆ ಸಮಯ ವಿಳಂಬವಾಯಿತು. ಈ ರೀತಿಯ ಕರೆಗಳು ಬರುತ್ತಿರುತ್ತವೆ, ಕೆಲವರು ಸುಮ್ಮನೆ ಅನಾಮಧೇಯ ಕರೆ ಮಾಡುತ್ತಿರುತ್ತಾರೆ. ವಿಮಾನ ನಿಲ್ದಾಣದ ಸಿಬ್ಬಂದಿಗಳು ತಪಾಸಣೆ ನಡೆಸಿದರು. ಇದರಿಂದ ನನಗೆ ಅಧಿಕಾರಿಗಳ ಜೊತೆ ಸಭೆ ನಡೆಸಲು ನಿಗಧಿಗಿಂತ ಸಮಯಕ್ಕಿಂತ ಅರ್ಧಗಂಟೆ ವಿಳಂಬವಾಗಿದ್ದು ಬಿಟ್ಟರೆ ಮತ್ತೇನಾಗಿಲ್ಲ. ಅಲ್ಲಿ ಯಾವುದೇ ರೀತಿಯ ಆತಂಕ ಇರಲಿಲ್ಲ. ಅದೊಂದು ಅನಾಮಧೆಯ ಕರೆ ಅನ್ನಿಸುತ್ತೆ ಎಂದು ಸಚಿವ ಕೃಷ್ಣ ಭೈರೇಗೌಡ ಹೇಳಿದರು.
ಇದೇ ವರ್ಷ ಏ.29 ರಂದು ಬೆಂಗಳೂರಿನ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ ಮೇಲ್ ಬಂದಿತ್ತು. ವಿಮಾನ ನಿಲ್ದಾಣದ ಮ್ಯಾನೇಜರ್ ಅವರ ಮೇಲ್ಗೆ “ವಿಮಾನದಲ್ಲಿ ಟೈಂ ಬಾಂಬ್ ಇಡಲಾಗಿದೆ. ಯಾವುದೇ ಸಮಯದಲ್ಲಿ ಸ್ಫೋಟಗೊಳ್ಳಬಹುದು. ಜೊತೆಗೆ, ಟರ್ಮಿನಲ್ 1 ರ ಒಳಗೆ ವಿವಿಧ ಸ್ಥಳಗಳಲ್ಲಿ ಸ್ಫೋಟಕ ವಸ್ತುಗಳನ್ನು ಇರಿಸಲಾಗಿದೆ” ಅಂತ ಸಂದೇಶ ಬಂದಿತ್ತು.