ಬೆಂಗಳೂರು, ಜೂ.23: ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣ ಪ್ರವೇಶ ಶುಲ್ಕ ಏರಿಕೆಯಾಗುವ ಸಾಧ್ಯತೆ ಇದೆ. ಎಂಜನಿಯರಿಂಗ್ ಶುಲ್ಕ ಏರಿಕೆ ಬಳಿಕ ಈಗ ಮೆಡಿಕಲ್ ಸೀಟ್ ಶುಲ್ಕ ಏರಿಕೆಗೆ ವೈದ್ಯಕೀಯ ಶಿಕ್ಷಣ ಇಲಾಖೆ ಮನಸ್ಸು ಮಾಡಿದೆ. ವೈದ್ಯಕೀಯ, ದಂತ ವೈದ್ಯಕೀಯ ಸೇರಿದ್ದಂತೆ ವೈದ್ಯಕೀಯ ಶಿಕ್ಷಣದ ಕಾಲೇಜುಗಳಲ್ಲಿನ ಖಾಸಗಿ ಕೋಟಾದ ಸೀಟುಗಳ ಶುಲ್ಕವನ್ನು ಶೇ15 ರಷ್ಟು ಹೆಚ್ಚಳ ಮಾಡಲು ವೈದ್ಯಕೀಯ ಕಾಲೇಜುಗಳು ಬೇಡಿಕೆ ಇಟ್ಟಿವೆ.
ಕಳೆದ ಎರಡು ವರ್ಷಗಳಿಂದ ವೈದ್ಯಕೀಯ ಶುಲ್ಕ ಏರಿಕೆ ಮಾಡಿಲ್ಲ ಅಂತ ಸರ್ಕಾರಕ್ಕೆ ವೈದ್ಯಕೀಯ ಕಾಲೇಜುಗಳು ತಿಳಿಸಿವೆ. 2024-25ನೇ ಸಾಲಿಗೆ ರಾಜ್ಯದಲ್ಲಿನ ಸರ್ಕಾರಿ, ಖಾಸಗಿ ಹಾಗೂ ಡೀಮ್ಡ್ ವಿಶ್ವವಿದ್ಯಾಲಯಗಳ ವ್ಯಾಪ್ತಿಯ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕಾಲೇಜುಗಳಲ್ಲಿನ ಸ್ನಾತಕ ಕೋರ್ಸುಗಳ ಸೀಟುಗಳ ಪ್ರವೇಶ ಶುಲ್ಕವನ್ನು ನಿಗದಿಪಡಿಸುವ ಬಗ್ಗೆ ವೈದ್ಯಕೀಯ ಶಿಕ್ಷಣ ಇಲಾಖೆ ಸಭೆ ನಡೆಸಿದೆ.
ವೈದ್ಯಕೀಯ ಕಾಲೇಜುಗಳು ಶೇ15 ರಷ್ಟು ಶುಲ್ಕ ಹೆಚ್ಚಳದ ಪ್ರಸ್ತಾವನೆ ಇಟ್ಟರೂ, ಶೇ10 ರಷ್ಟು ಶುಲ್ಕ ಏರಿಕೆಗೆ ವೈದ್ಯಕೀಯ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಬೆಲೆ ಏರಿಕೆ ಮಧ್ಯೆ ಶಿಕ್ಷಣದ ಬೆಲೆ ಹೆಚ್ಚಳದ ಬಗ್ಗೆ ಜನರು, ಕನ್ನಡಪರ ಸಂಘಟನೆಗಳು ಆಕ್ರೋಶ ಹೊರಹಾಕಿದ್ದಾರೆ.
2018-19ರಲ್ಲಿ ಸರಾಸರಿ ಶೇ26 ರಷ್ಟು ಶುಲ್ಕ ಹೆಚ್ಚಳಕ್ಕೆ ಸರ್ಕಾರ ಹಸಿರು ನಿಶಾನೆ ತೋರಿಸಿತ್ತು. ತದನಂತರದಲ್ಲಿ 2019-20, 2020-21ರಲ್ಲಿ ಶೇಕಾಡ ಶೇ15ರಷ್ಟು ಶುಲ್ಕ ಹೆಚ್ಚಳ ಮಾಡಲಾಗಿತ್ತು. ಆದರೆ ಈ ಮಧ್ಯೆ ಕೊರೊನಾ ಕಾರಣ ಕಳೆದ ಎರಡು ವರ್ಷಗಳಿಂದ ಯಾವುದೇ ಶುಲ್ಕ ಹೆಚ್ಚಳ ಮಾಡಿಲ್ಲ. ಸದ್ಯ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಮೆಡಿಕಲ್ ಸೀಟಿಗೆ 50 ಸಾವಿರ ಇದ್ದರೆ, ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದಡಿ 1,28,726 ರೂ. ಶುಲ್ಕ ಇದೆ.