ಹೈದರಾಬಾದ್, ನವೆಂಬರ್ 1: ಕರ್ನೂಲ್ ಬಸ್ ದುರಂತದ ಕಹಿ ನೆನಪು ಮಾಸುವ ಮುನ್ನವೇ ಆಂಧ್ರ ಪ್ರದೇಶದಲ್ಲಿಮತ್ತೊಂದು ಭೀಕರ ದುರಂತ ಸಂಭವಿಸಿದೆ. ಶ್ರೀಕಾಕುಳಂ ಜಿಲ್ಲೆಯ ಕಾಶಿಬುಗ್ಗ ಪಟ್ಟಣದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ ಒಂಬತ್ತು ಭಕ್ತರು ಮೃತಪಟ್ಟಿದ್ದಾರೆ. ಹಲವಾರು ಮಂದಿ ಗಾಯಗೊಂಡಿದ್ದಾರೆ. ಕಾರ್ತಿಕ ಮಾಸದ ಏಕಾದಶಿ ಪ್ರಯುಕ್ತ ಪ್ರಾರ್ಥನೆ ಸಲ್ಲಿಸಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಸಮಯದಲ್ಲಿ ದುರಂತ ಸಂಭವಿಸಿದೆ ಎಂದು ಆಂಧ್ರ ಪ್ರದೇಶ ಸಿಎಂ ಕಚೇರಿಯ ಪ್ರಕಟಣೆ ತಿಳಿಸಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಕಾರ್ತಿಕ ಮಾಸದ ಏಕಾದಶಿಯ ಕಾರಣ ದೇಗುಲಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ದರ್ಶನಕ್ಕಾಗಿ ದೇವಾಲಯದಲ್ಲಿ ಭಕ್ತರು ಜಮಾಯಿಸಿದ್ದರು. ಆರಂಭಿಕ ವರದಿಗಳ ಪ್ರಕಾರ, ದೇವಾಲಯದ ಆವರಣದ ಪ್ರವೇಶದ್ವಾರದ ಬಳಿ ಜನಸಂದಣಿಯ ಒತ್ತಡ ಇದ್ದಕ್ಕಿದ್ದಂತೆ ಹೆಚ್ಚಾಯಿತು. ಇದು ಜನರಲ್ಲಿ ಗೊಂದಲವನ್ನು ಉಂಟುಮಾಡಿತು ಮತ್ತು ಕಾಲ್ತುಳಿತಕ್ಕೆ ಕಾರಣವಾಯಿತು. ಅನೇಕ ಜನರು ಕೆಳಗೆ ಬಿದ್ದು ಕಾಲ್ತುಳಿತಕ್ಕೊಳಗಾದರು.


