ನವದೆಹಲಿ: ಬಿಸಿಗಾಳಿ, ಬಿರುಬೇಸಿಗೆಯಿಂದ ತತ್ತರಿಸಿದ್ದ ದೆಹಲಿಗೆ ಶುಕ್ರವಾರ ಮುಂಗಾರು ಪ್ರವೇಶಿಸಿದೆ. ಮೊದಲ ದಿನವೇ 88 ವರ್ಷಗಳ ದಾಖಲೆಯ 23 ಸೆಂ.ಮೀ. ಮಳೆಯಾಗಿದ್ದು, ರಾಜಧಾನಿಯಲ್ಲಿ ಪ್ರವಾಹ ಸೃಷ್ಟಿಯಾಗಿದೆ. 88 ವರ್ಷಗಳ ಬಳಿಕ ಸುರಿದ ವರ್ಷಧಾರೆಗೆ ತತ್ತರಿಸಿ ಹೋಗಿದೆ.
ಮುಂಜಾನೆ 4 ಗಂಟೆಯಿಂದ 8.30 ಗಂಟೆಯವರೆಗೆ ಮಳೆ ಸುರಿದಿದ್ದು, ದೆಹಲಿಯ ಪ್ರಮುಖ ಭಾಗಗಳು ಹಾಗೂ ಹಲವು ಪ್ರದೇಶಗಳು ಜಲಾವೃತಗೊಂಡಿವೆ.8 ಮತ್ತು 10 ವರ್ಷ ವಯಸ್ಸಿನ ಇಬ್ಬರು ಮಕ್ಕಳು ಸೇರಿದಂತೆ ಪ್ರತ್ಯೇಕ ಘಟನೆಗಳಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ.
ದೆಹಲಿ ವಿಮಾನ ನಿಲ್ದಾಣದಲ್ಲಿ ಮೊದಲ ಸಾವು ವರದಿಯಾಗಿದೆ, 45 ವರ್ಷದ ಕ್ಯಾಬ್ ಡ್ರೈವರ್ ಕಾರಿನ ಮೇಲೆ ಮೇಲ್ಚಾವಣಿ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಮಳೆಯಿಂದಾಗಿ ವಸಂತ ವಿಹಾರ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡ ಕುಸಿದು ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.