ಬೆಳಗಾವಿ ಜಿಲ್ಲೆಯಲ್ಲಿ ‘ಮನರೇಗಾ’ ಯೋಜನೆಯಡಿ 71.33 ಲಕ್ಷ ಮಾನವ ದಿನಗಳ ಉದ್ಯೋಗ ಸೃಷ್ಟಿ – ಸಂಸದ ಈರಣ್ಣ ಕಡಾಡಿ

MK HasiruKranti
ಬೆಳಗಾವಿ ಜಿಲ್ಲೆಯಲ್ಲಿ ‘ಮನರೇಗಾ’ ಯೋಜನೆಯಡಿ 71.33 ಲಕ್ಷ ಮಾನವ ದಿನಗಳ ಉದ್ಯೋಗ ಸೃಷ್ಟಿ – ಸಂಸದ ಈರಣ್ಣ ಕಡಾಡಿ
WhatsApp Group Join Now
Telegram Group Join Now
ಮೂಡಲಗಿ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಗ್ರಾಮೀಣಾಭಿವೃದ್ಧಿಗೆ ನೀಡುತ್ತಿರುವ ಆದ್ಯತೆಯ ಫಲವಾಗಿ, ಬೆಳಗಾವಿ ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅಭೂತಪೂರ್ವ ಪ್ರಗತಿ ದಾಖಲಾಗಿದೆ. ಪ್ರಸಕ್ತ 2025-26ನೇ ಹಣಕಾಸು ವರ್ಷದಲ್ಲಿ (10.03.2026ರವರೆಗೆ) ಜಿಲ್ಲೆಯಾದ್ಯಂತ ಒಟ್ಟು 71.33 ಲಕ್ಷ ಮಾನವ ದಿನಗಳನ್ನು ಸೃಷ್ಟಿಸಿ ಗ್ರಾಮೀಣ ಜನರಿಗೆ ಉದ್ಯೋಗ ಭದ್ರತೆ ನೀಡಲಾಗಿದೆ ಎಂದು ರಾಜ್ಯಸಭಾ  ಸಂಸದ ಈರಣ್ಣ ಕಡಾಡಿ ಅವರು ತಿಳಿಸಿದ್ದಾರೆ.
ನವದೆಹಲಿಯಲ್ಲಿ ನಡೆಯುತ್ತಿರುವ ಸಂಸತ್ತಿನ ಬಜೆಟ್‌ ಅಧಿವೇಶನದಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಮನರೇಗಾ ಯೋಜನೆಯ ಪ್ರಗತಿ ಮತ್ತು ವೇತನ ಪಾವತಿ  ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವ ಕಮಲೇಶ್ ಪಾಸ್ವಾನ್ ಅವರು ಜಿಲ್ಲೆಯಲ್ಲಿ ಜಲ ಸಂರಕ್ಷಣೆ, ಕೆರೆಗಳ ಪುನಶ್ಚೇತನ ಮತ್ತು ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಗ್ರಾಮ ಪಂಚಾಯತ್ ಮಟ್ಟದಲ್ಲಿ ಗ್ರಾಮ ಸಭೆಗಳ ಮೂಲಕ ಜನರೇ ತಮಗೆ ಬೇಕಾದ ಕಾಮಗಾರಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದು ಈ ಯೋಜನೆಯ ಯಶಸ್ಸಿಗೆ ಕಾರಣವಾಗಿದೆ.
ಭ್ರಷ್ಟಾಚಾರ ಮತ್ತು ವಿಳಂಬವನ್ನು ತಡೆಯಲು ಆಧಾರ್ ಆಧಾರಿತ ಪಾವತಿ ವ್ಯವಸ್ಥೆ ( ರಾಷ್ಟ್ರೀಯ ಎಲೆಕ್ಟ್ರಾನಿಕ್ ನಿಧಿ ನಿರ್ವಹಣಾ ವ್ಯವಸ್ಥೆ) ಬಳಕೆಯಿಂದ ಹಣದ ಹರಿವು ಸುಗಮವಾಗಿದೆ. ಹೊಸದಾಗಿ ಜಾರಿಗೆ ಬಂದ ವಿಕಸಿತ ಭಾರತ -ಜಿ ರಾಮ್‌ ಜಿ  ಕಾಯ್ದೆ, 2025 ರ ಪ್ರಕಾರ, ಕೆಲಸ ಪೂರ್ಣಗೊಂಡ 15 ದಿನಗಳೊಳಗೆ ವೇತನ ಪಾವತಿಸಬೇಕಾಗುತ್ತದೆ. ವಿಳಂಬವಾದಲ್ಲಿ ಕಾರ್ಮಿಕರು ಪರಿಹಾರ ಪಡೆಯಲು ಅರ್ಹರಿರುತ್ತಾರೆ. ಪ್ರಸ್ತುತ ದೇಶದ ಶೇ. 99.69 ರಷ್ಟು ಕಾರ್ಮಿಕರು ಈ ವ್ಯವಸ್ಥೆಯಡಿ ನೋಂದಾಯಿತರಾಗಿದ್ದಾರೆ
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ  ಯೋಜನೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ತಡೆಯಲು ಪ್ರತಿ ಆರು ತಿಂಗಳಿಗೊಮ್ಮೆ ಗ್ರಾಮ ಸಭೆಗಳ ಮೂಲಕ ಕಡ್ಡಾಯವಾಗಿ ಸಾಮಾಜಿಕ ಪರಿಶೋಧನೆ ನಡೆಸಲಾಗುತ್ತಿದೆ. ಇದರಿಂದ ಸಾರ್ವಜನಿಕ ಹಣದ ಸದುಪಯೋಗವಾಗುತ್ತಿರುವುದನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ ಯೋಜನೆಯಲ್ಲಿರುವ 267 ಕಾಮಗಾರಿಗಳ ಪೈಕಿ 70 ಕೆಲಸಗಳು ರೈತರ ಮತ್ತು ಬಡವರ ಸ್ವಂತ ಜಮೀನಿನಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲು ಮೀಸಲಿವೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 54 ಲಕ್ಷಕ್ಕೂ ಅಧಿಕ ವೈಯಕ್ತಿಕ ಕಾಮಗಾರಿಗಳು ಪೂರ್ಣಗೊಂಡಿವೆ. ಪ್ರಸಕ್ತ ವರ್ಷದಲ್ಲಿ ಜಲ ಸಂರಕ್ಷಣೆ ಮತ್ತು ಕೊಯ್ಲು ವಿಭಾಗದಲ್ಲಿ 2,70,223 ಕಾಮಗಾರಿಗಳು ಪೂರ್ಣಗೊಂಡಿವೆ ಮತ್ತು 7,14,313 ಕಾಮಗಾರಿಗಳು ಪ್ರಗತಿಯಲ್ಲಿವೆ.  ಗ್ರಾಮೀಣ ರಸ್ತೆ ಸಂಪರ್ಕ 2,33,642 ಕಾಮಗಾರಿಗಳು ಪೂರ್ಣಗೊಂಡಿವೆ ಮತ್ತು 11,18,747 ಕಾಮಗಾರಿಗಳು ಪ್ರಗತಿಯಲ್ಲಿವೆ. ಜಿಲ್ಲೆಯಲ್ಲಿ ಅಮೃತ ಸರೋವರಗಳು, ಕೃಷಿ ಹೊಂಡಗಳು ಮತ್ತು ಸಾಂಪ್ರದಾಯಿಕ ನೀರಿನ ಮೂಲಗಳ ಪುನಶ್ಚೇತನಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆಂದು ಸಂಸದ ಈರಣ್ಣ ಕಡಾಡಿ ಅವರು ವಿವರಿಸಿದ್ದಾರೆ.
WhatsApp Group Join Now
Telegram Group Join Now
Share This Article