ಮಂಡ್ಯ, ಆಗಸ್ಟ್ 12: ಮೊಟ್ಟೆ ಕೊಡುತ್ತಿರುವುದನ್ನು ವಿರೋಧಿಸಿ 70 ವಿದ್ಯಾರ್ಥಿಗಳು ಸರ್ಕಾರಿ ಶಾಲೆ ತೊರೆದ ಘಟನೆ ಮಂಡ್ಯ ತಾಲೂಕಿನ ಆಲಕೆರೆ ಗ್ರಾಮದಲ್ಲಿ ನಡೆದಿದೆ. ಶಾಲೆಯಲ್ಲಿ ಮಕ್ಕಳಿಗೆ ಮೊಟ್ಟೆ ವಿತರಣೆ ಮಾಡುವ ವಿಚಾರದಲ್ಲಿ ಪರ ವಿರೋಧ ಚರ್ಚೆ ಸೃಷ್ಟಿಯಾಗಿತ್ತು. ಮಕ್ಕಳಿಗೆ ಮೊಟ್ಟೆ ಕೊಟ್ಟರೆ ಶಾಲೆ ಬಿಡಿಸುವುದಾಗಿ ಹೆಚ್ಚಿನ ಪೋಷಕರು ಈ ಹಿಂದೆಯೇ ತಿಳಿಸಿದ್ದರು. ಕೆಲವೇ ಸಂಖ್ಯೆಯ ಪೋಷಕರು ಮೊಟ್ಟೆ ನೀಡುವಂತೆ ಆಗ್ರಹಿಸಿದ್ದರು. ಹೀಗಾಗಿ ಇಕ್ಕಟ್ಟಿಗೆ ಸಿಲುಕಿದ್ದ ಅಧಿಕಾರಿಗಳು ನಿಯಮದಂತೆ ಮೊಟ್ಟೆ ವಿತರಣೆ ಆರಂಭಿಸಿದ್ದರು. ಇದರ ಬೆನ್ನಲ್ಲೇ ಮಕ್ಕಳು ಸಾಮೂಹಿಕವಾಗಿ ಶಾಲೆ ತೊರದಿದ್ದಾರೆ. ಶಾಲೆಯಲ್ಲಿ ಒಟ್ಟಾರೆಯಾಗಿ 124 ಮಕ್ಕಳು ಓದುತ್ತಿದ್ದು ಆ ಪೈಕಿ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದೀಗ ಶಾಲೆ ತೊರೆದಿದ್ದಾರೆ. ನಮ್ಮ ಧಾರ್ಮಿಕ ಭಾವನೆಗೆ ಬೆಲೆ ಸಿಗದ ಜಾಗದಲ್ಲಿ ಓದುವುದು ಬೇಡ ಎಂದು ವಿದ್ಯಾರ್ಥಿಗಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ್ದಾರೆ.
ಮೊಟ್ಟೆ ಕೊಡುತ್ತಿರುವುದನ್ನು ವಿರೋಧಿಸಿ ಸರ್ಕಾರಿ ಶಾಲೆ ತೊರೆದ 70 ವಿದ್ಯಾರ್ಥಿಗಳು

ಮಂಡ್ಯ ತಾಲೂಕಿನ ಆಲಕೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮೊಟ್ಟೆ ನೀಡುವ ವಿಚಾರವಾಗಿ ಕಳೆದ ತಿಂಗಳು ಪರ-ವಿರೋಧ ವ್ಯಕ್ತವಾಗಿತ್ತು. ಶಾಲೆ ಬಳಿ ವೀರಭದ್ರೇಶ್ವರ ಸ್ವಾಮಿ ದೇಗುಲ ಇರುವುದರಿಂದ ಮೊಟ್ಟೆ ವಿತರಣೆ ಮಾಡಬಾರದು. ದೇಗುಲದ ಸುತ್ತಮುತ್ತ ಮಾಂಸಾಹಾರ, ಮೊಟ್ಟೆಯನ್ನು ಸ್ಥಳೀಯರ ಇಚ್ಛೆಯಂತೆ ನಿಷೇಧಿಸಲಾಗಿದೆ ಎಂದು ಕೆಲವು ಮಂದಿ ಪೋಷಕರು ಆಗ್ರಹಿಸಿದ್ದರು. ಈ ಕಾರಣಕ್ಕೆ ಶಾಲೆಯಲ್ಲಿ ಕೂಡ ಮೊಟ್ಟೆ ವಿತರಿಸದಿರಲು ಎಸ್ಡಿಎಂಸಿ ನಿರ್ಧರಿಸಿತ್ತು. ಮೊಟ್ಟೆ ಬದಲಿಗೆ ಬಾಳೆಹಣ್ಣು ಅಥವಾ ಮಿಠಾಯಿ ವಿತರಣೆ ಮಾಡಲಾಗುತ್ತಿತ್ತು. ಆದರೆ, ಇತ್ತೀಚೆಗೆ ಮತ್ತೆ ಮೊಟ್ಟೆ ವಿತರಣೆ ಮಾಡಲು ಮುಂದಾಗಿದ್ದು ಹೆಚ್ಚಿನ ಪೋಷಕರ ವಿರೋಧಕ್ಕೆ ಗುರಿಯಾಗಿತ್ತು.