ಕಲಘಟಗಿ: ಕಲುಷಿತ ನೀರು ಕುಡಿದು 70ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾದ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮುಟಗಿ ಗ್ರಾಮದಲ್ಲಿ ಗುರುವಾರ ನಡೆದಿದೆ.
ಗ್ರಾಮದಲ್ಲಿ ಕಲುಷಿತ ನೀರು ಕುಡಿದ ಬಳಿಕ ಹಲವರಲ್ಲಿ ವಾಂತಿ ಹಾಗೂ ಅತಿಸಾರ ಕಾಣಿಸಿಕೊಂಡಿದೆ. ಅಸ್ವಸ್ಥಗೊಂಡ 70 ಮಂದಿಯ ಪೈಕಿ 10 ಮಂದಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಹಾಗೂ 36 ಮಂದಿ ಕಲಘಟಗಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಔಷಧಿ ಪಡೆದುಕೊಂಡ ಪರಿಣಾಮ ಚೇತರಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.
ಈ ನಡುವೆ ನಿರ್ಲಕ್ಷ್ಯದ ಆರೋಪದ ಮೇಲೆ ಸ್ಥಳೀಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ್ ಕುಮಾರ್ ಗನ್ನಿ ಅವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ದಿವ್ಯಾ ಪ್ರಭು ಆದೇಶ ಹೊರಡಿಸಿದ್ದಾರೆ.
ಏತನ್ಮಧ್ಯೆ ಮುಟಗಿಗೆ ಭೇಟಿ ನೀಡಿದ ದಿವ್ಯಾ ಪ್ರಭು ಅವರು, ಗ್ರಾಮಕ್ಕೆ ಮೂರು ಬೋರ್ವೆಲ್ಗಳಿಂದ ನೀರು ಬರುತ್ತದೆ. ಇತ್ತೀಚೆಗೆ ಸುರಿದ ಹಿಂಗಾರು ಮಳೆಯಿಂದಾಗಿ ಹೊಸ ನೀರು ಕಲಘಟಗಿ ಕೆರೆಗಳಿಗೆ ಹರಿದುಹೋಗಿದೆ. ಇದೇ ಸಂದರ್ಭದಲ್ಲಿ ಕಲುಷಿತ ನೀರು ಕೂಡ ಬಂದಿರುವ ಸಾಧ್ಯತೆಯಿದೆ. ನೀರಿನ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಎಂದು ಹೇಳಿದ್ದಾರೆ