70 ಸೈಬರ್ ವಂಚಕರ ಬಂಧನ: ತಮಿಳುನಾಡು ಪೊಲೀಸರಿಂದ ʼಆಪರೇಷನ್‌ ತಿರೈನೀಕುʼ ಕಾರ್ಯಾಚರಣೆ

Ravi Talawar
70 ಸೈಬರ್ ವಂಚಕರ ಬಂಧನ: ತಮಿಳುನಾಡು ಪೊಲೀಸರಿಂದ ʼಆಪರೇಷನ್‌ ತಿರೈನೀಕುʼ ಕಾರ್ಯಾಚರಣೆ
WhatsApp Group Join Now
Telegram Group Join Now

ಚೆನ್ನೈ: ಸೈಬರ್ ಕ್ರಿಮಿನಲ್​ಗಳ ವಿರುದ್ಧ ತಮಿಳುನಾಡು ಪೊಲೀಸರು ಸಮರ ಸಾರಿದ್ದು, ಆರೋಪಿಗಳ ಬಂಧನಕ್ಕೆ ರಾಜ್ಯಾದ್ಯಂತ ಬೃಹತ್ ಕಾರ್ಯಾಚರಣೆ ಆರಂಭಿಸಿದ್ದಾರೆ. ‘ಆಪರೇಷನ್ ತಿರೈನೀಕು’ ಎಂದು ಹೆಸರಿಸಲಾದ ಈ ಕಾರ್ಯಾಚರಣೆಯ ಭಾಗವಾಗಿ ಇಲ್ಲಿಯವರೆಗೆ ರಾಜ್ಯಾದ್ಯಂತ ದಾಖಲಾದ 135 ದೂರುಗಳಿಗೆ ಸಂಬಂಧಿಸಿದಂತೆ 70 ಸೈಬರ್ ವಂಚಕರನ್ನು ಬಂಧಿಸಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಪೊಲೀಸ್ ಆಯುಕ್ತರ ಮೇಲ್ವಿಚಾರಣೆಯಲ್ಲಿ ರಚಿಸಲಾದ ವಿಶೇಷ ತಂಡಗಳು ಈ ವಿಶೇಷ ಕಾರ್ಯಾಚರಣೆಯನ್ನು ನಡೆಸಿದ್ದು, ಇದನ್ನು ರಾಜ್ಯ ಸೈಬರ್ ಅಪರಾಧ ವಿಭಾಗ (ಸಿಸಿಡಬ್ಲ್ಯೂ) ಯೋಜಿಸಿದೆ. ಇಡೀ ಕಾರ್ಯಾಚರಣೆಯ ಮೇಲ್ವಿಚಾರಣೆಯನ್ನು ಎಡಿಜಿಪಿ (ಸೈಬರ್ ಅಪರಾಧ) ಸಂದೀಪ್ ಮಿತ್ತಲ್ ವಹಿಸಿದ್ದಾರೆ.

ರಾಜ್ಯದಲ್ಲಿ ಸಂಘಟಿತ ಸೈಬರ್ ಅಪರಾಧ ಜಾಲಗಳನ್ನು ನಿರ್ಮೂಲನೆ ಮಾಡುವಲ್ಲಿ ಈ ಬಂಧನಗಳು ಮಹತ್ವದ ಯಶಸ್ಸಾಗಿವೆ ಎಂದು ತಮಿಳುನಾಡು ಪೊಲೀಸರು ಹೇಳಿಕೆಯಲ್ಲಿ ಬಣ್ಣಿಸಿದ್ದಾರೆ. “ಈ ಕಾರ್ಯಾಚರಣೆಯು ಭಾರತದಲ್ಲಿ ಈ ರೀತಿಯ ಅತಿದೊಡ್ಡ ಕಾರ್ಯಾಚರಣೆಗಳಲ್ಲಿ ಒಂದಾಗಿದೆ. ಇದು ಸೈಬರ್ ಕ್ರೈಮ್ ನೆಟ್ ವರ್ಕ್​ನ ಬೆನ್ನೆಲುಬನ್ನೇ ಮುರಿಯಲಿದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ರಾಷ್ಟ್ರೀಯ ಸೈಬರ್ ಅಪರಾಧ ವರದಿ (ಎನ್​ಸಿಆರ್​ಪಿ) ಪೋರ್ಟಲ್, ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ (ಐ 4 ಸಿ) ಡೇಟಾಬೇಸ್​ಗಳು ಮತ್ತು ಸೈಬರ್ ಅಪರಾಧ ನೆಟ್ ವರ್ಕ್​​ಗಳ ಹಣಕಾಸು ದತ್ತಾಂಶ ವಿಶ್ಲೇಷಣೆಯನ್ನು ಬಳಸಿಕೊಂಡು ಆರೋಪಿಗಳ ಪ್ರೊಫೈಲಿಂಗ್ ತಯಾರಿಸಿ ಈ ಕಾರ್ಯಾಚರಣೆಯನ್ನು ನಡೆಸಲಾಗಿದೆ.

2024 ರ ಜನವರಿ ಮತ್ತು ಆಗಸ್ಟ್ ನಡುವೆ ಒಟ್ಟು 1,679 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿನ 1,589 ದೂರುಗಳು ಹಣಕಾಸು ವಂಚನೆಗಳಿಗೆ ಸಂಬಂಧಿಸಿವೆ. ಈ ಹಗರಣಗಳಿಂದ ಜನತೆ ಸುಮಾರು 189 ಕೋಟಿ ರೂ. ಕಳೆದುಕೊಂಡಿದ್ದಾರೆ ಎಂದು ಗ್ರೇಟರ್ ಚೆನ್ನೈ ನಗರ ಪೊಲೀಸರು ವರದಿ ಮಾಡಿದ್ದಾರೆ.

WhatsApp Group Join Now
Telegram Group Join Now
Share This Article