ಬೆಂಗಳೂರು07: ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ಮಂಗಳವಾರ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ಇದರೊಂದಿಗೆ ಕರ್ನಾಟಕದಲ್ಲಿ ಲೋಕಸಮರಕ್ಕೆ ತೆರೆ ಬಿದ್ದಿದೆ.
ರಾಜ್ಯದ ಉಳಿದ 14 ಕ್ಷೇತ್ರಗಳಲ್ಲಿ ಇಂದು ಬೆಳಗ್ಗೆ 7ರಿಂದ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆವರೆಗೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಜನರು ಬಿಸಿಲಿನ ನಡುವೆಯೂ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದ್ದು, ಒಟ್ಟು 227 ಅಭ್ಯರ್ಥಿಗಳ ಭವಿಷ್ಯ ವಿದ್ಯುನ್ಮಾನ ಮತಯಂತ್ರ ಸೇರಿದೆ. ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ.
ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಗುಲ್ಬರ್ಗ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಇಂದು ಚುನಾವಣೆ ನಡೆದಿದ್ದು, 14 ಕ್ಷೇತ್ರಗಳಲ್ಲಿ ಸಂಜೆ. 5.30 ರ ವರೆಗೆ ಒಟ್ಟಾರೆ ಶೇ. 66 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
“ಯಾವುದೇ ಹಿಂಸಾಚಾರ ವರದಿಯಾಗಿಲ್ಲ. ರಾಜ್ಯದಲ್ಲಿ ಎರಡನೇ ಹಂತದ ಲೋಕಸಭೆ ಚುನಾವಣೆ ಶಾಂತಿಯುತವಾಗಿದೆ” ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು ಪಿಟಿಐಗೆ ತಿಳಿಸಿದ್ದಾರೆ.
ಇಂದು ಮತದಾನ ನಡೆದ 14 ಕ್ಷೇತ್ರಗಳ ಪೈಕಿ ಚಿಕ್ಕೋಡಿಯಲ್ಲಿ ಅತ್ಯಧಿಕ ಅಂದರೆ ಶೇ.72.75 ರಷ್ಟು ಮತದಾನವಾಗಿದೆ. ಶಿವಮೊಗ್ಗದಲ್ಲಿ ಶೇ.72.07, ಹಾಗೂ ಗುಲ್ಬರ್ಗದಲ್ಲಿ ಕನಿಷ್ಠ ಶೇ.57.20ರಷ್ಟು ಮತದಾನವಾಗಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.
ಒಟ್ಟು 227 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, ಈ ಪೈಕಿ 206 ಪುರುಷರು ಮತ್ತು 21 ಮಹಿಳೆಯರಿದ್ದಾರೆ. ಎರಡನೇ ಹಂತದಲ್ಲಿ 28,269 ಮತಗಟ್ಟೆಗಳಲ್ಲಿ 2.59 ಕೋಟಿಗೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದರು.
ದಾವಣಗೆರೆಯಲ್ಲಿ ಅತಿ ಹೆಚ್ಚು ಅಂದರೆ 30 ಅಭ್ಯರ್ಥಿಗಳು ಕಣದಲ್ಲಿದ್ದು, ಶಿವಮೊಗ್ಗದಲ್ಲಿ 23 ಅಭ್ಯರ್ಥಿಗಳು, ರಾಯಚೂರಿನಲ್ಲಿ ಅತ್ಯಂತ ಕಡಿಮೆ ಅಂದರೆ ಎಂಟು ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದರು.
ಏತನ್ಮಧ್ಯೆ, ಇಂದು ಉಪಚುನಾವಣೆ ನಡೆದ ಯಾದಗಿರಿ ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ ಸಂಜೆ 5 ಗಂಟೆಯವರೆಗೆ 66.72 ರಷ್ಟು ಮತದಾನವಾಗಿದೆ.
ಕಳೆದ ತಿಂಗಳು ಸುರಪುರ ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ್ ಅವರ ನಿಧನದಿಂದ ತೆರವಾದ ಈ ಸ್ಥಾನಕ್ಕೆ ಉಪಚುನಾವಣೆ ನಡೆಸಲಾಗಿದೆ.