ಅಂಕಾರಾ: ಪಶ್ಚಿಮ ಟರ್ಕಿಯಲ್ಲಿ ಸೋಮವಾರ ಪ್ರಬಲ ಭೂಕಂಪ ಸಂಭವಿಸಿದ್ದು, ಕನಿಷ್ಠ ಮೂರು ಕಟ್ಟಡಗಳು ಕುಸಿದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾವು – ನೋವುಗಳ ಬಗ್ಗೆ ತಕ್ಷಣದ ವರದಿಗಳಿಲ್ಲ.
ವಿಪತ್ತು ಮತ್ತು ತುರ್ತು ನಿರ್ವಹಣಾ ಸಂಸ್ಥೆ (AFAD) ಪ್ರಕಾರ, 6.1ರಷ್ಟು ತೀವ್ರತೆಯ ಭೂಕಂಪವು ಬಲಿಕೇಸಿರ್ ಪ್ರಾಂತ್ಯದ ಸಿಂಡಿರ್ಗಿ ಪಟ್ಟಣದಲ್ಲಿ ಕೇಂದ್ರೀಕೃತವಾಗಿತ್ತು. ಇದು ಸ್ಥಳೀಯ ಸಮಯ (1948 GMT) 22:48 ಕ್ಕೆ 5.99 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ ಎಂದು ಹೇಳಲಾಗಿದೆ.
ಭೂಕಂಪದ ಬಳಿಕ ಪುನರಾವರ್ತಿತ ಕಂಪನಗಳು ಸಂಭವಿಸಿವೆ. ಇಸ್ತಾಂಬುಲ್ ಮತ್ತು ಹತ್ತಿರದ ಪ್ರಾಂತ್ಯಗಳಾದ ಬುರ್ಸಾ, ಮನಿಸಾ ಮತ್ತು ಇಜ್ಮಿರ್‌ನಲ್ಲಿ ಈ ಭೂಮಿ ನಡುಗಿದೆ. ಸಿಂಡಿರ್ಗಿಯಲ್ಲಿ ಕನಿಷ್ಠ ಮೂರು ಖಾಲಿ ಕಟ್ಟಡಗಳು ಮತ್ತು ಎರಡು ಅಂತಸ್ತಿನ ಅಂಗಡಿ ಕುಸಿದಿದೆ ಎಂದು ಆಂತರಿಕ ಸಚಿವ ಅಲಿ ಯೆರ್ಲಿಕಾಯಾ ಹೇಳಿದರು. ಹಿಂದಿನ ಭೂಕಂಪದಲ್ಲಿ ರಚನೆಗಳು ಈಗಾಗಲೇ ಹಾನಿಗೊಳಗಾಗಿದ್ದವು.
ಭೂಕಂಪನದಿಂದ ಒಟ್ಟು 22 ಜನರು ಗಾಯಗೊಂಡಿದ್ದಾರೆ ಎಂದು ಬಲಿಕೇಸಿರ್‌ನ ಗವರ್ನರ್ ಇಸ್ಮಾಯಿಲ್ ಉಸ್ತಾಗ್ಲು ಹೇಳಿದ್ದಾರೆ. ಇಲ್ಲಿಯವರೆಗೆ ನಾವು ಯಾವುದೇ ಜೀವಹಾನಿಯಾದ ಬಗ್ಗೆ ವರದಿಯನ್ನು ಪಡೆದುಕೊಂಡಿಲ್ಲ ಎಂದು ಸಿಂದಿರ್ಗಿಯ ಜಿಲ್ಲಾ ಆಡಳಿತಾಧಿಕಾರಿ ಡೊಗುಕನ್ ಕೊಯುಂಕು ಸರ್ಕಾರಿ ಸ್ವಾಮ್ಯದ ಅನಾಡೋಲು ಏಜೆನ್ಸಿಗೆ ತಿಳಿಸಿದ್ದಾರೆ.


