ಮಂಗಳೂರು: ಮಂಗಳೂರಿನ ನೈಋತ್ಯಕ್ಕೆ ಸುಮಾರು 60-70 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಮುಳುಗಿದ ಎಂಎಸ್‌ವಿ ಸಲಾಮತ್ ಎಂಬ ಸರಕು ಸಾಗಣೆ ಹಡಗಿನ ಆರು ಸಿಬ್ಬಂದಿಯನ್ನು ಭಾರತೀಯ ಕರಾವಳಿ ರಕ್ಷಣಾ ಪಡೆ (ಐಸಿಜಿ) ಯಶಸ್ವಿಯಾಗಿ ರಕ್ಷಿಸಿದೆ.
ಬುಧವಾರ ಮಧ್ಯಾಹ್ನ 12.15ರ ಸುಮಾರಿಗೆ ಕರ್ನಾಟಕದ ಸುರತ್ಕಲ್ ಕರಾವಳಿಯಿಂದ ಸುಮಾರು 52 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಹಡಗೊಂದು ಮುಳುಗಿದ್ದು ಅದರಲ್ಲಿದ್ದ ಆರು ಸಿಬ್ಬಂದಿಗಳು ಸಣ್ಣ ದೋಣಿ ಮೂಲಕ ಜೀವ ಉಳಿಸಿಕೊಂಡಿದ್ದರು. ಈ ಪ್ರದೇಶದಲ್ಲಿ ದಿನನಿತ್ಯದ ಗಸ್ತು ತಿರುಗುತ್ತಿದ್ದ ಐಸಿಜಿ ಹಡಗು ವಿಕ್ರಮ್ ಅನ್ನು ತಕ್ಷಣವೇ ಸ್ಥಳಕ್ಕೆ ತೆರಳಿದ್ದು ಆರು ಸಿಬ್ಬಂದಿಗಳನ್ನು ರಕ್ಷಿಸಲಾಗಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ಮೇ 12ರಂದು ಮಂಗಳೂರು ಬಂದರಿನಿಂದ ಲಕ್ಷದ್ವೀಪದ ಕದ್ಮತ್ ದ್ವೀಪಕ್ಕೆ ತೆರಳುತ್ತಿದ್ದ ಎಂಎಸ್‌ವಿ ಸಲಾಮತ್, ಮೇ 14ರಂದು ಬೆಳಿಗ್ಗೆ 05.30ಕ್ಕೆ ಪ್ರವಾಹಕ್ಕೆ ಸಿಲುಕಿ ಮುಳುಗಿತ್ತು. ರಕ್ಷಿಸಲ್ಪಟ್ಟ ಸಿಬ್ಬಂದಿಯನ್ನು ಇಸ್ಮಾಯಿಲ್ ಶರೀಫ್, ಅಲೆಮುನ್ ಅಹ್ಮದ್ ಭಾಯ್ ಘವ್ಡಾ, ಕಾಕಲ್ ಸುಲೇಮಾನ್ ಇಸ್ಮಾಯಿಲ್, ಅಕ್ಬರ್ ಅಬ್ದುಲ್ ಸುರಾನಿ, ಕಸಮ್ ಇಸ್ಮಾಯಿಲ್ ಮೇಪಾನಿ ಮತ್ತು ಅಜ್ಮಲ್ ಎಂದು ಗುರುತಿಸಲಾಗಿದೆ.