ನವದೆಹಲಿ: ಮೊದಲೆಲ್ಲ ಬಹುತೇಕ ಆರೋಗ್ಯ ಸಮಸ್ಯೆಗಳಿಗೆ ಗಿಡಮೂಲಿಕೆಗಳು, ಆಯುರ್ವೇದಿಕ್ ಔಷಧಗಳನ್ನು ಅವಲಂಬಿಸಿದ್ದರು. ಆದರೆ, ಈಗ ಪ್ರತಿಯೊಂದಕ್ಕೂ ಮಾತ್ರೆಗಳನ್ನು ನುಂಗುವವರ ಸಂಖ್ಯೆ ಹೆಚ್ಚಾಗಿದೆ. ಇದೀಗ ಮಧುಮೇಹ ಔಷಧಗಳು, ಅಧಿಕ ರಕ್ತದೊತ್ತಡದ ನಿವಾರಕ ಔಷಧಿಗಳು, ಪ್ಯಾರಸಿಟಮಾಲ್ ಸೇರಿದಂತೆ ಒಟ್ಟು 53 ಔಷಧಿಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿದೆ ಎಂಬುದು ಆತಂಕಕ್ಕೆ ಕಾರಣವಾಗಿದೆ.
ಇತ್ತೀಚಿನ ಮಾಸಿಕ ಔಷಧ ಎಚ್ಚರಿಕೆಯ ಪಟ್ಟಿಯಲ್ಲಿ, ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ಸ್ ಕಂಟ್ರೋಲ್ ಆರ್ಗನೈಸೇಶನ್ (CDSCO) ಪ್ಯಾರಸಿಟಮಾಲ್ ಸೇರಿದಂತೆ 53 ಔಷಧಗಳನ್ನು “ನಾಟ್ ಆಫ್ ಸ್ಟ್ಯಾಂಡರ್ಡ್ ಕ್ವಾಲಿಟಿ (NSQ)” ಎಂದು ಘೋಷಿಸಿದೆ. ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ3 ಪೂರಕಗಳು, ಮಧುಮೇಹದ ಮಾತ್ರೆಗಳು ಮತ್ತು ಅಧಿಕ ರಕ್ತದೊತ್ತಡದ ಔಷಧಿಗಳು ಸೇರಿದಂತೆ 50ಕ್ಕೂ ಹೆಚ್ಚು ಔಷಧಗಳು ಭಾರತದ ಔಷಧ ನಿಯಂತ್ರಕದಿಂದ ಗುಣಮಟ್ಟದ ಪರೀಕ್ಷೆಗಳಲ್ಲಿ ವಿಫಲವಾಗಿವೆ.