ಉತ್ತರ ಅಫ್ಘಾನಿಸ್ತಾನದ ಬಾಗ್ಲಾನ್ ಪ್ರಾಂತ್ಯದಲ್ಲಿ ಭಾರೀ ಪ್ರವಾಹಕ್ಕೆ50 ಮಂದಿ ಸಾವು

Ravi Talawar
ಉತ್ತರ ಅಫ್ಘಾನಿಸ್ತಾನದ ಬಾಗ್ಲಾನ್ ಪ್ರಾಂತ್ಯದಲ್ಲಿ  ಭಾರೀ ಪ್ರವಾಹಕ್ಕೆ50 ಮಂದಿ ಸಾವು
WhatsApp Group Join Now
Telegram Group Join Now

ಉತ್ತರ ಅಫ್ಘಾನಿಸ್ತಾನದ ಬಾಗ್ಲಾನ್ ಪ್ರಾಂತ್ಯದಲ್ಲಿ ಸುರಿದ ಋತುಮಾನದ ಮಳೆಯು ಭಾರೀ ಪ್ರವಾಹಕ್ಕೆ ಕಾರಣವಾಗಿದ್ದು, ಇದರಿಂದ ಕನಿಷ್ಠ 50 ಮಂದಿ ಸಾವನ್ನಪ್ಪಿದ್ದಾರೆ ಎಂದು ತಾಲಿಬಾನ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರೀ ಪ್ರವಾಹದಿಂದ ಅನೇಕ ಜಿಲ್ಲೆಗಳಲ್ಲಿ ಮನೆ ಮತ್ತು ಆಸ್ತಿಪಾಸ್ತಿ ನಷ್ಟ ಉಂಟಾಗಿದೆ ಎಂದು ಬಾಗ್ಲಾನ್‌ನ ನೈಸರ್ಗಿಕ ವಿಕೋಪ ನಿರ್ವಹಣೆಯ ಪ್ರಾಂತೀಯ ನಿರ್ದೇಶಕ ಎಡಾಯತ್​ಉಲ್ಲಾ ಹಮ್ದರ್ದ್ ತಿಳಿಸಿದ್ದಾರೆ. ಭಾರೀ ಪ್ರವಾಹದಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಅಂದಾಜಿಸಿದ್ದಾರೆ.

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​​ನಲ್ಲಿ​ ಕೂಡ ಭಾರೀ ಪ್ರವಾಹ ಅಪ್ಪಳಿಸಿದೆ ಎಂದು ನೈಸರ್ಗಿಕ ವಿಕೋಪ ನಿರ್ವಹಣೆಯ ರಾಜ್ಯ ಸಚಿವಾಲಯದ ತಾಲಿಬಾನ್ ವಕ್ತಾರ ಅಬ್ದುಲ್ಲಾ ಜನನ್ ಸೈಕ್ ತಿಳಿಸಿದ್ದಾರೆ. ಪ್ರವಾಹ ಪೀಡಿತ ಪ್ರದೇಶದಲ್ಲಿ ಸಂತ್ರಸ್ತರಿಗೆ ಆಹಾರ ಸೇರಿದಂತೆ ಇತರೆ ನೆರವು ನೀಡಲು ರಕ್ಷಣಾ ತಂಡವನ್ನು ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಸದ್ಯ ಪ್ರವಾಹ ಪೀಡಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ನಮ್ಮ ಮುಖ್ಯ ಗುರಿಯಾಗಿದೆ. ಈ ಸಂದರ್ಭದಲ್ಲಿ ಸಾವು ನೋವುಗಳು ಮತ್ತು ಹಾನಿಗಳ ಬಗ್ಗೆ ಹೆಚ್ಚು ನಿಖರವಾದ ಅಂಕಿ-ಅಂಶ ನೀಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಫ್ಘಾನ್​ನಲ್ಲಿ ಏಪ್ರಿಲ್​ನಲ್ಲಿ ಸುರಿದ ಭಾರೀ ಮಳೆಯಿಂದ ಉಂಟಾದ ಪ್ರವಾಹದಲ್ಲಿ ಕನಿಷ್ಠ 70 ಮಂದಿ ಸಾವನ್ನಪ್ಪಿದ್ದರು. ಪ್ರವಾಹದಿಂದ 2,000 ಮನೆಗಳು, ಮೂರು ಮಸೀದಿಗಳು ಮತ್ತು ನಾಲ್ಕು ಶಾಲೆಗಳು ಹಾನಿಗೊಳಗಾಗಿವೆ. ಕೃಷಿ ಭೂಮಿ ಪ್ರವಾಹದಿಂದ ಹಾನಿಯಾಗಿದ್ದು, 2,500 ಜಾನುವಾರುಗಳು ಸಾವನ್ನಪ್ಪಿದ್ದವು. ಸಾವಿರಾರು ಜನರು ಪ್ರವಾಹದಿಂದ ತತ್ತರಿಸಿದ್ದು, ಅವರಿಗೆ ಸೂಕ್ತ ನೆರವು ಬೇಕಾಗಿದೆ ಎಂದರು.

ದಕ್ಷಿಣ ಬ್ರೆಜಿಲ್‌ನ ರಿಯೊ ಗ್ರಾಂಡೆ ಡೊ ಸುಲ್​ನಲ್ಲಿನ ಪ್ರವಾಹದಿಂದ ಸಾವನ್ನಪ್ಪಿದವರ ಸಂಖ್ಯೆ 116ಕ್ಕೆ ಏರಿದೆ. 143 ಮಂದಿ ಕಣ್ಮರೆಯಾಗಿದ್ದು, 756 ಮಂದಿ ಗಾಯಗೊಂಡಿದ್ದಾರೆ. ಪ್ರವಾಹ ಸ್ಥಳದಿಂದ 4 ಲಕ್ಷ ಮಂದಿಯನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಂಡ ಮಾರುತವೂ 1,947,372 ಜನರ ಬದುಕಿನ ಮೇಲೆ ಪರಿಣಾಮ ಬೀರಿದ್ದು, 70,863 ಮಂದಿಯನ್ನು ರಕ್ಷಿಸಲಾಗಿದೆ ಅಧಿಕಾರಿಗಳು ತಿಳಿಸಿದ್ದಾರೆ. ಅರ್ಜೆಂಟೀನಾ ಮತ್ತು ಉರುಗ್ವೆಯ ಗಡಿಯಲ್ಲಿರುವ ರಿಯೊ ಗ್ರಾಂಡೆ ಡೊ ಸುಲ್​​ನಲ್ಲಿ ಏಪ್ರಿಲ್​ 29ರಿಂದ ಭಾರೀ ಮಳೆಯಾಗುತ್ತಿದ್ದು, ಅತ್ಯಂತ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ. 437 ಮುನ್ಸಿಪಾಲಿಟಿಗಳು ಕೂಡ ಚಂಡಮಾರುತದಿಂದ ನಲುಗುತ್ತಿವೆ.

WhatsApp Group Join Now
Telegram Group Join Now
Share This Article