ಬಳ್ಳಾರಿ,ಆ.೧೩: ರಾಜ್ಯ ಸರ್ಕಾರವು ೬,೨೦೦ ಸರ್ಕಾರಿ ಶಾಲೆಗಳನ್ನು “ವಿಲೀನ”ಗೊಳಿಸುವ ಹೆಸರಿನಲ್ಲಿ ಮುಚ್ಚಲು ಹೊರಟಿರುವುದನ್ನು ವಿರೋಧಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ಹಮ್ಮಿಕೊಂಡಿದ್ದ ಐತಿಹಾಸಿಕ ೫೦ ಲಕ್ಷ ಸಹಿ ಸಂಗ್ರಹ ಅಭಿಯಾನವು ಯಶಸ್ವಿಯಾಗಿ ಪೂರ್ಣಗೊಂಡಿದೆ. “ಸರ್ಕಾರಿ ಶಾಲೆಗಳನ್ನು ಉಳಿಸಿ ಮತ್ತು ಬಲಪಡಿಸಿ” ಎಂಬ ಕರೆಯೊಂದಿಗೆ ಪ್ರಾರಂಭವಾದ ಈ ಅಭಿಯಾನವು ರಾಜ್ಯದ ಇತಿಹಾಸದಲ್ಲಿಯೇ ಅತಿದೊಡ್ಡ ವಿದ್ಯಾರ್ಥಿ ಚಳುವಳಿಗಳಲ್ಲಿ ಒಂದಾಗಿ ಹೊರಹೊಮ್ಮಿದೆ.
೫೦,೦೦೦ ಕ್ಕೂ ಹೆಚ್ಚು ಸ್ವಯಂಸೇವಕರು ರಾಜ್ಯಾದ್ಯಂತ ಈ ಅಭಿಯಾನದಲ್ಲಿ ಭಾಗವಹಿಸಿದ್ದು, ಪೋಷಕರು, ವಿದ್ಯಾರ್ಥಿಗಳು ಸ್ಥಳೀಯ ನಾಗರಿಕರ ಜೊತೆ ಸೇರಿ ನೂರಾರು ಪ್ರತಿಭಟನಾ ಸಭೆಗಳನ್ನು ನಡೆಸಿದ್ದಾರೆ. ಹಲವು ಜಿಲ್ಲೆಗಳಲ್ಲಿ, ಈ ಹೋರಾಟವು, ಅಧಿಕಾರಿಗಳು ಅನೇಕ ಶಾಲೆಗಳಲ್ಲಿ ಮೂಲ ಸೌಕರ್ಯಗಳನ್ನು ಸುಧಾರಿಸುವಂತೆ ಮಾಡಿದೆ. ಅಲ್ಲದೆ, ಕರ್ನಾಟಕದಾದ್ಯಂತ ಹಲವಾರು ಶಿಕ್ಷಕರು, ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಣ ತಜ್ಞರಿಂದ ಈ ಚಳುವಳಿಗೆ ಬೆಂಬಲ ವ್ಯಕ್ತವಾಗಿದೆ. ರಾಜ್ಯದ ೩೦ ಜಿಲ್ಲೆಗಳ ೧೫೦ ಕ್ಕೂ ಹೆಚ್ಚು ತಾಲೂಕುಗಳನ್ನು ಈ ಅಭಿಯಾನವು ತಲುಪಿದ್ದು, ೧೦೦೦ ಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದರು.
ಸಂಗ್ರಹಿಸಲಾದ ಸಹಿಗಳನ್ನು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಯಲಿರುವ ಬೃಹತ್ ಸಮಾರೋಪ ಸಮಾರಂಭದಲ್ಲಿ ಮಾನ್ಯ ಮುಖ್ಯಮಂತ್ರಿಗಳಿಗೆ ಔಪಚಾರಿಕವಾಗಿ ಸಲ್ಲಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಸಾವಿರಾರು ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಮತ್ತು ಸಾರ್ವಜನಿಕ ಶಿಕ್ಷಣದ ಹಿತೈಷಿಗಳು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ವಿವರಗಳು: ಮುಖ್ಯ ಅತಿಥಿಗಳು: ಬರಗೂರು ರಾಮಚಂದ್ರಪ್ಪ (ಸಾಹಿತಿಗಳು ಮತ್ತು ಶಿಕ್ಷಣ ತಜ್ಞರು),
ಉದ್ಘಾಟನೆ: ಸಂತೋಷ್ ಹೆಗಡೆ (ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರು, ಮಾಜಿ ಲೋಕಾಯುಕ್ತರು), ಅತಿಥಿಗಳು : ಪ್ರೊ. ಎ. ಮುರಿಗೆಪ್ಪ (ವಿಶ್ರಾಂತ ಕುಲಪತಿಗಳು, ಹಂಪಿ ಕನ್ನಡ ವಿಶ್ವವಿದ್ಯಾಲಯ), ಕಿಶೋರ್ (ದಕ್ಷಿಣ ಭಾರತದ ಖ್ಯಾತ ಚಲನಚಿತ್ರ ನಟ), ಮುಖ್ಯ ಭಾಷಣಕಾರರು: ಶಿಬಾಶಿಷ್ ಪ್ರಹರಾಜ್ (ಪ್ರಧಾನ ಕಾರ್ಯದರ್ಶಿಗಳು, ಎಐಡಿಎಸ್‌ಒ ಕೇಂದ್ರ ಕೌನ್ಸಿಲ್), ಪ್ರಾಸ್ತಾವಿಕ ನುಡಿಗಳು: ಅಜಯ್ ಕಾಮತ್ (ರಾಜ್ಯ ಕಾರ್ಯದರ್ಶಿಗಳು, ಎಐಡಿಎಸ್‌ಒ ಕರ್ನಾಟಕ)
ಅಧ್ಯಕ್ಷತೆ: ಅಶ್ವಿನಿ ಕೆ.ಎಸ್. (ರಾಜ್ಯಾಧ್ಯಕ್ಷರು, ಎಐಡಿಎಸ್‌ಒ ಕರ್ನಾಟಕ), ಈ ಚಳುವಳಿಯು ಕರ್ನಾಟಕದ ವಿದ್ಯಾರ್ಥಿ ಚಳುವಳಿಯ ಇತಿಹಾಸದಲ್ಲಿ ಒಂದು ವಿಶಿಷ್ಟ ಹೆಜ್ಜೆಯಾಗಿದೆ ಎಂದು ಎಐಡಿಎಸ್‌ಒ ನಂಬುತ್ತದೆ. ಸರ್ಕಾರಿ ಶಾಲೆಗಳ ರಕ್ಷಣೆ ಮತ್ತು ಬಲವರ್ಧನೆಗಾಗಿ ನಡೆಯಲಿರುವ ಈ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಧ್ವನಿ ಎತ್ತಬೇಕೆಂದು ಎಐಡಿಎಸ್‌ಒ ಸಾರ್ವಜನಿಕರಲ್ಲಿ ಮನವಿ ಮಾಡುತ್ತದೆ.
ಈ ಸಂದರ್ಭದಲ್ಲಿ ಎಐಡಿಎಸ್‌ಒ ಜಿಲ್ಲಾ ಅಧ್ಯಕ್ಷರು ಕೆ.ಈರಣ್ಣ, ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ, ಜಿಲ್ಲಾ ಉಪಾಧ್ಯಕ್ಷರು ಎಂ.ಶಾAತಿ ಮತ್ತು ಉಮಾ ಉಪಸ್ಥಿತರಿದ್ದರು.