ಹುಬ್ಬಳ್ಳಿ: ನಗರದಲ್ಲಿ ಯುವಕನಿಂದ ಕೊಲೆಯಾದ ಯುವತಿ ಅಂಜಲಿ ಅಂಬಿಗೇರ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 5 ಲಕ್ಷ ರೂ. ಪರಿಹಾರ ಮಂಜೂರು ಮಾಡಿ ಆದೇಶಿಸಲಾಗಿದೆ. ವೀರಾಪುರ ಓಣಿ ಕರಿಯಮ್ಮನ ಗುಡಿ ಬಳಿಯ ಮನೆಯಲ್ಲಿ ಮೇ 15ರಂದು ಅಂಜಲಿ ಕೊಲೆ ನಡೆದಿತ್ತು.
ಅಂದು ಬೆಳಗಿನಜಾವ ಪರಿಚಿತನಾದ ಗಿರೀಶ ಸಾವಂತ ಎಂಬಾತ, ಅಂಜಲಿ ಅಂಬಿಗೇರ (20) ಮನೆಗೆ ನುಗ್ಗಿ ಹತ್ಯೆ ಮಾಡಿ ಪರಾರಿಯಾಗಿದ್ದ. ಈ ಘಟನೆಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಮೃತಳ ಕುಟುಂಬಸ್ಥರಿಗೆ ಪರಿಹಾರ ಮಂಜೂರು ಮಾಡಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರು.
ಸರ್ಕಾರವು ಈ ವರದಿಯನ್ನಾಧರಿಸಿ ಮೃತಳ ಕುಟುಂಬದ ಕಾನೂನುಬದ್ಧ ನೈಜ ವಾರಸುದಾರರಿಗೆ 5 ಲಕ್ಷ ರೂ. ಪರಿಹಾರ ಮಂಜೂರು ಮಾಡಿದೆ. ಧಾರವಾಡ ಜಿಲ್ಲಾಧಿಕಾರಿ ಖಾತೆಗೆ ಹಣ ರವಾನಿಸಲಾಗಿದೆ ಎಂದು ಮುಖ್ಯಮಂತ್ರಿಗಳ ಕಾರ್ಯದರ್ಶಿ ಟಿ.ಎ.ಗೋಪಾಲ್ ಆದೇಶದಲ್ಲಿ ತಿಳಿಸಿದ್ದಾರೆ.