ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತನ್ನ ಪೋರ್ಟಲ್‌ನಲ್ಲಿ ಯುಜಿಸಿಇಟಿ-2024ರ ಅಭ್ಯರ್ಥಿಗಳ ಮಾಹಿತಿಯನ್ನು ಜೂನ್ 29ರಂದು ಪ್ರಕಟಿಸಿದೆ. ಇದರಲ್ಲಿ ಯಾವುದೇ ತಪ್ಪು ಕಂಡುಬಂದಿದ್ದರೆ ಅಂತಹ ಅಭ್ಯರ್ಥಿಗಳು ಜುಲೈ 4ರಿಂದ 6ರ ಒಳಗೆ ಮಲ್ಲೇಶ್ವರದಲ್ಲಿರುವ ಕೆಇಎ ಕಚೇರಿಗೆ ಖುದ್ದು ಹಾಜರಾಗಿ ಸರಿಪಡಿಸಿಕೊಳ್ಳಬೇಕು ಎಂದು ಸೂಚಿಸಿದೆ.
ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳು ಯುಜಿಸಿಇಟಿ ಅರ್ಜಿಯಲ್ಲಿ ತಪ್ಪೆಸಗಿದ್ದರಿಂದ ವ್ಯತ್ಯಾಸಗಳಾಗಿದೆ. ಇದನ್ನು ಗಣನೆಗೆ ತೆಗೆದುಕೊಂಡು ಅಂತಿಮ ಆವಕಾಶ ನೀಡಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಮಂಗಳವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಒಂದು ಲಕ್ಷಕ್ಕಿಂತ ಒಳಗೆ ರ‍್ಯಾಂಕ್ ಹೊಂದಿರುವವರು ಜುಲೈ 4ರಂದು, 1.8 ಲಕ್ಷಕ್ಕಿಂತ ಒಳಗಿನ ರ‍್ಯಾಂಕ್‌ನವರು ಜುಲೈ 5ರಂದು ಹಾಗೂ 1.8 ಲಕ್ಷಕ್ಕಿಂತ ಮೇಲ್ಪಟ್ಟು ರ‍್ಯಾಂಕ್ ಹೊಂದಿರುವವರು ಜುಲೈ 6ರಂದು ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ವೇಳಾಪಟ್ಟಿಯಂತೆ ಹಾಜರಾಗಬೇಕಿದೆ.
ಎಲ್ಲಾ ಮಾಹಿತಿ ಸರಿ ಇರುವವರು ಕೆಇಎಗೆ ಬರುವ ಅಗತ್ಯವಿಲ್ಲ. ಇಂತಹ ಅಭ್ಯರ್ಥಿಗಳು ಕಚೇರಿಗೆ ಬಂದು ಸಮಯ ಹಾಗೂ ಶ್ರಮ ವ್ಯರ್ಥ ಮಾಡಿಕೊಳ್ಳಬಾರದು. ಅಂಥವರಿಗೆ ವೆರಿಫಿಕೇಶನ್ ಸ್ಲಿಪ್ ಡೌನ್ಲೋಡ್ ಮಾಡಿಕೊಳ್ಳಲು ಸದ್ಯದಲ್ಲೇ ಕೆಇಎ ವೆಬ್‌ಸೈಟ್‌ನಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.
ಅಭ್ಯರ್ಥಿಗಳು ಅರ್ಜಿಯಲ್ಲಿ ಸಲ್ಲಿಸಿದ್ದ ವಿವರಗಳಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳಿಂದ ವೆಬ್‌ಸರ್ವಿಸ್ ಮೂಲಕ ಪಡೆದ ಮಾಹಿತಿಯನ್ನು ಪೋರ್ಟಲ್‌ನಲ್ಲಿ ಪ್ರಕಟಿಸಿ ಪರಿಶೀಲಿಸಿಕೊಳ್ಳಲು ಜೂನ್ 29ರಿಂದ ಅವಕಾಶ ನೀಡಲಾಗಿತ್ತು.