ಮಂಗಳೂರು: ಮುಸಲ್ಮಾನರ ಪವಿತ್ರ ಹಬ್ಬ ಈದ್ ಮಿಲಾದ್ ಮುನ್ನಾದಿನ ಕರಾವಳಿಯ ಮಂಗಳೂರಿನ ಎರಡು ಧಾರ್ಮಿಕ ಸ್ಥಳಗಳ ಮೇಲೆ ಕಲ್ಲು ತೂರಾಟ ಮತ್ತು ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ದಕ್ಷಿಣ ಕನ್ನಡ ಜಿಲ್ಲೆಯ ಕಾಟಿಪಳ್ಳ ಪಟ್ಟಣ ಮತ್ತು ಬಿ.ಸಿ.ರೋಡ್ನಲ್ಲಿ ಇಂದು ಸೋಮವಾರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಮಂಗಳೂರು ತಾಲೂಕಿನ ಕಾಟಿಪಳ್ಳ ಪೇಟೆಯಲ್ಲಿ ನಿನ್ನೆ ಭಾನುವಾರ ತಡರಾತ್ರಿ ಕಲ್ಲು ತೂರಾಟ ನಡೆಯಿತು. ಪೊಲೀಸರ ಕ್ಷಿಪ್ರ ಕ್ರಮದಿಂದಾಗಿ ಪರಿಸ್ಥಿತಿ ಹತೋಟಿಗೆ ಬಂದಿದ್ದು, ಯಾವುದೇ ಅಹಿತಕರ ಘಟನೆಗಳು ನಡೆದ ವರದಿಯಾಗಿಲ್ಲ. ಧಾರ್ಮಿಕ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಕಿಟಕಿ ಗಾಜುಗಳು ಒಡೆದು ಹೋಗಿವೆ.
ಕಲ್ಲು ತೂರಾಟಗಾರರು ನಿನ್ನೆ ರಾತ್ರಿ ಎರಡು ಬೈಕ್ಗಳಲ್ಲಿ ಬಂದು ವೇಗವಾಗಿ ಹೋಗಿದ್ದು, ಘಟನೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಎರಡು ಗುಂಪುಗಳ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಪ್ರಚೋದನಕಾರಿ ಹೇಳಿಕೆಗಳು ನಡೆದು ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಪೇಟೆಯ ರಾಷ್ಟ್ರೀಯ ಹೆದ್ದಾರಿ 75ರ ಪಕ್ಕದಲ್ಲಿ ಪರಿಸ್ಥಿತಿ ಸೂಕ್ಷ್ಮವಾಗಿದೆ.
ಇದರ ಬೆನ್ನಲ್ಲೇ ಬಂಟ್ವಾಳದ ಪೂರ್ವ ಭಾಗದ ಉಪ್ಪಿನಂಗಡಿ ಮತ್ತು ಪಶ್ಚಿಮ ಭಾಗದಲ್ಲಿ ಪಾಣೆಮಂಗಳೂರು ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.