ಹೈದರಾಬಾದ್ ,24: ಏಪ್ರಿಲ್ನಿಂದ ತೆಲಂಗಾಣದಲ್ಲಿ ಬಿಸಿಲು ಬೇಗೆ ಹೆಚ್ಚುತ್ತಿದೆ. ಹಲವು ಜಿಲ್ಲೆಗಳಲ್ಲಿ ಈಗಾಗಲೇ 45 ಡಿಗ್ರಿ ತಾಪಮಾನ ದಾಖಲಾಗಿದೆ. ಆದರೆ, ಕೆಂಡ ಕಾರುತ್ತಿರುವ ಸೂರ್ಯನ ತಾಪಕ್ಕೆ ಮುಖ್ಯವಾಗಿ ಹೊರಾಂಗಣ ಕೆಲಸಗಾರರ ಮೇಲೆ ಹೆಚ್ಚು ಪ್ರಭಾವ ಬೀರುತ್ತಿದೆ ಎಂದು ಅನೇಕ ಅಧ್ಯಯನಗಳು ಹೇಳುತ್ತಿವೆ. ಬಿಸಿಲಿನ ಝಳಕ್ಕೆ ತುತ್ತಾಗುವ ಸಂಭವ ಇರುವುದರಿಂದ ರೈತರು, ಕೃಷಿ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಕಟ್ಟಡ ಕಾರ್ಮಿಕರು ಎಚ್ಚರಿಕೆ ವಹಿಸಬೇಕು ಎಂದು ತಜ್ಞರು ಸೂಚಿಸಿದ್ದಾರೆ.
ರಾಜ್ಯದ ಕೆಲವೆಡೆ ಗರಿಷ್ಠ ತಾಪಮಾನ 45ರಷ್ಟು ದಾಖಲಾಗಿರುವುದು ಆತಂಕಕಾರಿಯಾಗಿದ್ದು, ಮಂಗಳವಾರ ಮಿರ್ಯಾಲಗೂಡದಲ್ಲಿ 45.1 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಸೋಮವಾರ ಇಲ್ಲಿ 45 ಡಿಗ್ರಿ ಉಷ್ಣಾಂಶ ಇತ್ತು. ಈ ಜಿಲ್ಲೆಯ ವೇಮುಲಪಲ್ಲಿ, ದಾಮರಚಾರ್ಲ, ಅನುಮುಲ ಹಳಿಯ, ತಿರುಮಲಗಿರಿ (ಸಾಗರ), ತ್ರಿಪುರಾರಂ, ಗಟ್ಟುಪ್ಪಲ್, ನಿಡಮನೂರು ತಾಲೂಕುಗಳಲ್ಲಿ 44 ಡಿಗ್ರಿ ಉಷ್ಣಾಂಶಕ್ಕೆ ಜನ ಬೆಚ್ಚಿ ಬಿದ್ದಿದ್ದಾರೆ. ಭದ್ರಾದ್ರಿ ಕೊತಗುಡೆಂ, ಮುಲುಗು, ಖಮ್ಮಂ ಮತ್ತು ಸೂರ್ಯಪೇಟ್ ಜಿಲ್ಲೆಗಳಲ್ಲಿ 43.7 ರಿಂದ 44.9 ಡಿಗ್ರಿ ತಾಪಮಾನ ದಾಖಲಾಗಿದೆ.
ಹೈದರಾಬಾದ್ ಮಹಾನಗರ ಪಾಲಿಕೆಯಲ್ಲಿ 41.3 ರಿಂದ 43 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಖಮ್ಮಂನಲ್ಲಿ ತಾಪಮಾನ ಸಾಮಾನ್ಯಕ್ಕಿಂತ 4 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಿದೆ. ಪೆದ್ದಪಲ್ಲಿ ಜಿಲ್ಲೆಯ ಮಂಥನಿ ತಾಲೂಕಿನ ವಿಲೋಚವರಂನಲ್ಲಿ ಉದ್ಯೋಗ ಖಾತ್ರಿ ಕೆಲಸ ಮಾಡುತ್ತಿದ್ದ ವೇಳೆ ಲಕ್ಷ್ಮಿ (55) ಎಂಬ ಮಹಿಳೆ ಬಿಸಿಲಿಗೆ ಸಾವನ್ನಪ್ಪಿದ್ದಾರೆ. ಅಲ್ಲದೇ ಸೂರ್ಯಪೇಟ ಜಿಲ್ಲೆ ಆತ್ಮಕೂರು (ಎಸ್) ತಾಲೂಕಿನ ಕೋಟಿನಾಯಕ್ ತಾಂಡಾದ ದಾರಾವತ್ ಗೋಳ್ಯಾ (70) ಹಾಗೂ ರಾಜಣ್ಣ ಸಿರಿಸಿಲ್ಲ ಜಿಲ್ಲೆಯ ವೇಮುಲವಾಡ ಗ್ರಾಮಾಂತರ ತಾಲೂಕಿನ ಬಾಲರಾಜಪಲ್ಲಿಯ ನಾಗುಲ ಬಾಲಯ್ಯ (50) ಬಿಸಿಲಿಗೆ ಸಾವನ್ನಪ್ಪಿದ್ದಾರೆ. ಹವಾಮಾನ ಇಲಾಖೆ ಪ್ರಕಾರ, ಬುಧವಾರ ಮತ್ತು ಗುರುವಾರ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ.
ಏಪ್ರಿಲ್ನಲ್ಲೇ ಬಿಸಿಲಿನ ತೀವ್ರತೆ ಹೀಗಿದ್ದರೆ, ಮೇ ತಿಂಗಳಲ್ಲಿ ಪರಿಸ್ಥಿತಿ ಏನಾಗಬಹುದು ಎಂಬ ಆತಂಕ ಜನರದ್ದು. ಮೇ ತಿಂಗಳಲ್ಲಿ ತಾಪಮಾನ 48 ರಿಂದ 49 ಡಿಗ್ರಿ ತಲುಪಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ರಾಜ್ಯದಲ್ಲಿ ಬಿಸಿಲಿನ ಜತೆಗೆ ಬಿಸಿಗಾಳಿ ತೀವ್ರತೆಯೂ ಹೆಚ್ಚಲಿದೆ ಎನ್ನಲಾಗಿದೆ. ಬೆಳಗ್ಗೆ 11ರಿಂದ ಸಂಜೆ 4.30ರವರೆಗೆ ಹೊರಗೆ ಹೋಗದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ತುರ್ತು ಸಂದರ್ಭದಲ್ಲಿ, ತಜ್ಞರು ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.