ನವದೆಹಲಿ/ಬೆಂಗಳೂರು,23: 2023ರ ವಿಧಾನಸಭಾ ಚುನಾವಣೆ ವೇಳೆ ಮತದಾರರಿಗೆ ಲಂಚ ನೀಡುವುದು ಸೇರಿದಂತೆ ಅಕ್ರಮ ವಹಿವಾಟು ನಡೆಸಲು ಸುಮಾರು 42 ಕೋಟಿ ರೂಪಾಯಿ ಸಂಗ್ರಹಿಸಿದ ಬಳ್ಳಾರಿ ಕಾಂಗ್ರೆಸ್ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಇಡಿ ಪತ್ರ ಬರೆದಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್ 66(2)ರ ಅಡಿಯಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆಗೆ ಜಾರಿ ನಿರ್ದೇಶನಾಲಯವು ಇದೇ ರೀತಿಯ ಪತ್ರವನ್ನು ಬರೆದಿದ್ದು, ಬಳ್ಳಾರಿ ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ವಿರುದ್ಧ ತಾನು ಸಂಗ್ರಹಿಸಿದ ಸಾಕ್ಷ್ಯವನ್ನು ಪರಿಶೀಲಿಸುವಂತೆ ಕೋರಿದೆ.
ಅಕ್ರಮ ಗಣಿಗಾರಿಕೆ ಮತ್ತು ಕೆಲವು ಭೂ ವ್ಯವಹಾರಗಳ ಆರೋಪಗಳಿಗೆ ಸಂಬಂಧಿಸಿ ಮನಿ ಲಾಂಡರಿಂಗ್ ತನಿಖೆಯ ಭಾಗವಾಗಿ 2023ರ ಫೆಬ್ರವರಿ 10 ರಂದು ನಾರಾ ಭರತ್ ರೆಡ್ಡಿ ಹಾಗೂ ಅವರ ಆಪ್ತರ ಮನೆ, ಕಚೇರಿ ಮೇಲೆ ಇಡಿ ದಾಳಿ ನಡೆಸಿತ್ತು.
ದಾಳಿ ನಡೆದ ಮೂರು ದಿನಗಳ ನಂತರ, ಪತ್ರಿಕಾ ಪ್ರಕಟಣೆ ನೀಡಿದ್ದ ಇಡಿ, ದಾಳಿ ವೇಳೆ ಲೆಕ್ಕಕ್ಕೆ ಸಿಗದ 31 ಲಕ್ಷ ರೂಪಾಯಿ ನಗದು ಹಣ ಜೊತೆಗೆ ಮಹತ್ವದ ಸಾಕ್ಷ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ ಭರತ್ ರೆಡ್ಡಿ ಅವರು ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಬರೋಬ್ಬರಿ 42 ಕೋಟಿ ರೂಪಾಯಿ ವ್ಯವಹಾರ ನಡೆಸಿರುವ ದಾಖಲೆ ಸಿಕ್ಕಿದೆ ಎಂದು ಹೇಳಿತ್ತು.
42.07 ಕೋಟಿ ರೂಪಾಯಿಯಲ್ಲಿ ಮತದಾರರಿಗೆ ನಗದು ವಿತರಣೆ ಮತ್ತು ಪಕ್ಷದ ಟಿಕೆಟ್ಗಾಗಿ ಹಣ ನೀಡಿರುವುದು ಸೇರಿದಂತೆ ಇತರ ಚುನಾವಣಾ ಸಂಬಂಧಿತ ವೆಚ್ಚಗಳು ಇದರಲ್ಲಿ ಸೇರಿವೆ ಎಂದು ಇತ್ತೀಚೆಗೆ ಚುನಾವಣಾ ಆಯೋಗಕ್ಕೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ.
34 ವರ್ಷದ ಕಾಂಗ್ರೆಸ್ ಶಾಸಕರು “ಚುನಾವಣಾ ಆಯೋಗಕ್ಕೆ ಚುನಾವಣಾ ಸಂಬಂಧಿತ ವೆಚ್ಚವನ್ನು ಬಹಿರಂಗಪಡಿಸಲು ವಿಫಲರಾಗಿದ್ದಾರೆ ಮತ್ತು ಚುನಾವಣೆಯ ಸಮಯದಲ್ಲಿ ಖರ್ಚು ಮಾಡಿದ ಗಣನೀಯ ಹಣದ ಮೂಲವನ್ನು ಲೆಕ್ಕ ಹಾಕಲು ವಿಫಲರಾಗಿದ್ದಾರೆ” ಎಂದು ಇಡಿ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದೆ. ಈ ಆಪಾದಿತ ಕ್ರಮಗಳು ಲಂಚ, ಭ್ರಷ್ಟಾಚಾರ ಮತ್ತು ಚುನಾವಣಾ ವೆಚ್ಚವನ್ನು ಬಹಿರಂಗಪಡಿಸುವಲ್ಲಿ ವಿಫಲತೆ ಸೇರಿದಂತೆ ಪ್ರಜಾಪ್ರತಿನಿಧಿ ಕಾಯಿದೆಯ “ಉಲ್ಲಂಘನೆ” ಎಂದು ಹೇಳುವ ಮೂಲಕ ಶಾಸಕರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಚುನಾವಣಾ ಆಯೋಗಕ್ಕೆ ಇಡಿ ಕೋರಿದೆ.