ಬೆಂಗಳೂರು: ಗುತ್ತಿಗೆದಾರರ ಶೇಕಡಾ 40ರಷ್ಟು ಕಮಿಷನ್ ಆರೋಪ ಪ್ರಕರಣದ ವಿಚಾರಣೆ ಬಹುದೊಡ್ಡ ”ಚಾಲೆಂಜಿಂಗ್ ಟಾಸ್ಕ್” ಆಗಿತ್ತು ಎಂದು ಗುತ್ತಿಗೆದಾರರ ಪ್ರಕರಣದ ನ್ಯಾಯಾಂಗ ವಿಚಾರಣಾ ಆಯೋಗ ಅಧ್ಯಕ್ಷ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನದಾಸ್ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬುಧವಾರ ಸಂಜೆ ಗುತ್ತಿಗೆದಾರರ ಸಂಘದ ಕಮಿಷನ್ ಆರೋಪಗಳ ಬಗ್ಗೆ ತನಿಖೆ ನಡೆಸಿ 20 ಸಾವಿರ ಪುಟಗಳ (ಅನುಬಂಧ ಸೇರಿದಂತೆ) ವರದಿ ಸಲ್ಲಿಸಿದ ಬಳಿಕ ‘ಈಟಿವಿ ಭಾರತ’ ಜೊತೆ ಅವರು ಮಾತನಾಡಿದರು.
ಗುತ್ತಿಗೆದಾರರ ಕಮಿಷನ್ ಆರೋಪಗಳ ಬಗ್ಗೆ ತನಿಖೆ ನಡೆಸುವುದು, ಸಾಕ್ಷಿಗಳ ವಿಚಾರಣೆ ನಡೆಸಿ ನ್ಯಾಯಾಂಗ ವಿಚಾರಣಾ ಆಯೋಗವು ಸೂಕ್ತ ತೀರ್ಮಾನ ತೆಗೆದುಕೊಂಡು ಸರ್ಕಾರಕ್ಕೆ ವರದಿ ಸಲ್ಲಿಸುವುದು ಬಿಗ್ ಟಾಸ್ಕ್ ಎಂದರು.
ಆಯೋಗದ ಅಧಿಕಾರಿಗಳ ಸಹಕಾರ, ಸಿಬ್ಬಂದಿಯ ಪರಿಶ್ರಮದಿಂದ ಸುದೀರ್ಘ ತನಿಖಾ ವರದಿ ತಯಾರಿಸಿ ಸರ್ಕಾರ ವಹಿಸಿದ ಗುರುತರ ಜವಾಬ್ದಾರಿಯನ್ನು ನಿಭಾಯಿಸಲಾಗಿದೆ ಎಂದು ನ್ಯಾ.ನಾಗಮೋಹನದಾಸ್ ಹೇಳಿದರು.
ಗುತ್ತಿಗೆದಾರರ ಸಂಘ ಸರ್ಕಾರದ ಟೆಂಡರ್ ಕಾಮಗಾರಿಗಳಲ್ಲಿ ಶೇ.40ಕ್ಕಿಂತ ಅಧಿಕ ಕಮಿಷನ್ ನೀಡುವ ಪದ್ಧತಿ ಜಾರಿಯಲ್ಲಿದೆ ಎಂದು ಸಲ್ಲಿಸಿದ್ದ ದೂರುಗಳು, ಪ್ಯಾಕೇಜ್ ಪದ್ಧತಿ ಕೈಬಿಡುವುದು, ಎಸ್‌ಆರ್ ದರಪಟ್ಟಿ ನಿಗದಿ, ಸ್ಟಾರ್ ರೇಟ್ ಪದ್ಧತಿ ಜಾರಿ, ಪಾರದರ್ಶಕತೆ ಕಾಪಾಡಿಕೊಳ್ಳುವುದು, ಸೀನಿಯಾರಿಟಿ ಮೇಲೆ ಬಿಲ್ ಪಾವತಿ, ಕೆಆರ್‌ಐಡಿಎಲ್‌ನಿಂದ ಗುತ್ತಿಗೆದಾರರಿಗೆ ನೇರವಾಗಿ ಕಾಮಗಾರಿಗಳ ನೀಡಿಕೆ ತಪ್ಪಿಸುವುದು ಸೇರಿದಂತೆ ಹಲವಾರು ಆರೋಪಗಳ ಸತ್ಯಾಸತ್ಯತೆ ಬಗ್ಗೆ ವಿವರವಾದ ಅಧ್ಯಯನ ನಡೆಸಿರುವ ಆಯೋಗ ಸರ್ಕಾರಕ್ಕೆ ವರದಿ ಸಲ್ಲಿಸಿದೆ.