ಬಳ್ಳಾರಿ,ಮೇ19: ರಾಜ್ಯದ ಮಹಿಳೆಯರ ಸಬಲೀಕರಣದ ಉದ್ದೇಶದಿಂದ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಶಕ್ತಿ ಯೋಜನೆಯಡಿ ಮಹಿಳಾ ವಯಸ್ಕರು ಮತ್ತು ಹೆಣ್ಣು ಮಕ್ಕಳು ಒಳಗೊಂಡು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗದ ನಗರ ಸಾರಿಗೆ ಮತ್ತು ಸಾಮಾನ್ಯ ಬಸ್‌ಗಳಲ್ಲಿ ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣಿಸುತ್ತಿದ್ದು, ಈ ಯೋಜನೆಯಡಿ ಬಳ್ಳಾರಿ ಜಿಲ್ಲೆಯಲ್ಲಿ ಇದುವರೆಗೆ (ಮಾರ್ಚ್ ವರೆಗೆ) 4,52,37,755 ಮಹಿಳೆಯರು ಉಚಿತ ಪ್ರಯಾಣದ ಪ್ರಯೋಜನ ಪಡೆದಿದ್ದಾರೆ.
ಶಕ್ತಿ ಯೋಜನೆಯ ಜಾರಿಯಾದ ನಂತರ ಜಿಲ್ಲೆಯಲ್ಲಿ ಮಹಿಳಾ ವಯಸ್ಕರು ಮತ್ತು ಹೆಣ್ಣು ಮಕ್ಕಳಿಗೆ ಉಚಿತ ಪ್ರಯಾಣದ ಒಟ್ಟು ರೂ.167,99,61,992 ಮೊತ್ತದ ಉಚಿತ ಟಿಕೆಟ್‌ಗಳನ್ನು ವಿತರಣೆ ಮಾಡಲಾಗಿದ್ದು, ಈ ಮೊತ್ತವು ಬಳ್ಳಾರಿ ವಿಭಾಗಕ್ಕೆ ಪ್ರಮುಖ ಆದಾಯವಾಗಿದೆ. ಜಿಲ್ಲೆಯಲ್ಲಿ ಬಳ್ಳಾರಿ-1, ಬಳ್ಳಾರಿ-2, ಬಳ್ಳಾರಿ-3, ಸಿರುಗುಪ್ಪ, ಕುರುಗೋಡು ಮತ್ತು ಸಂಡೂರು ವಿಭಾಗಗಳಿವೆ. ಶಕ್ತಿ ಯೋಜನೆಯಡಿ ಇದುವರೆಗೆ (ಮಾರ್ಚ್ ಅಂತ್ಯದವರೆಗೆ) ಬಳ್ಳಾರಿ-1 ವಿಭಾಗದಲ್ಲಿ 73,55,413 ಮಹಿಳಾ ಪ್ರಯಾಣಿಕರು ಸಂಚಾರ ಮಾಡಿದ್ದು, ಒಟ್ಟು 30,92,36,224 ರೂ. ಮೊತ್ತದ ಟಿಕೇಟ್ ವಿತರಣೆ ಮಾಡಲಾಗಿದೆ. ಬಳ್ಳಾರಿ-2 ವಿಭಾಗದಲ್ಲಿ 71,14,913 ಮಹಿಳಾ ಪ್ರಯಾಣಿಕರು ಸಂಚರಿಸಿದ್ದು, 37,89,38,056 ರೂ. ಮೊತ್ತದ ಟಿಕೇಟ್ ವಿತರಣೆ ಮಾಡಲಾಗಿದೆ.
ಅದೇರೀತಿಯಾಗಿ ಬಳ್ಳಾರಿ-3 ವಿಭಾಗದಲ್ಲಿ 1,05,56,205 ಮಹಿಳಾ ಪ್ರಯಾಣಿಕರು ಸಂಚರಿಸಿದರೆ ಒಟ್ಟು 18,39,41,365 ರೂ. ಮೊತ್ತದ ಟಿಕೇಟ್ ನೀಡಲಾಗಿದೆ. ಸಿರುಗುಪ್ಪ ವಿಭಾಗದ ವ್ಯಾಪ್ತಿಯಲ್ಲಿ 74,18,672 ಮಂದಿ ಮಹಿಳೆಯರು ಸಂಚರಿಸಿದರೆ 31,05,36,366 ರೂ. ಮೊತ್ತದ ಟಿಕೇಟ್ ನೀಡಲಾಗಿದೆ. ಉಳಿದಂತೆ ಕುರುಗೋಡು ವಿಭಾಗದಲ್ಲಿ 43,73,244 ಮಹಿಳಾ ಪ್ರಯಾಣಿಕರು ಸಂಚರಿಸಿದರೆ ರೂ.18,56,36,676 ಮೊತ್ತದ ಟಿಕೇಟ್ ಮತ್ತು ಸಂಡೂರು ವಿಭಾಗದಲ್ಲಿ ಸಂಚರಿಸಿದ 84,19,308 ಮಹಿಳಾ ಪ್ರಯಾಣಿಕರಿಗೆ ರೂ.31,16,73,305 ಮೊತ್ತದ ಟಿಕೇಟ್ ವಿತರಿಸಲಾಗಿದೆ ಎಂದು ನಿಗಮದ ಅಧಿಕಾರಿಗಳು ಹೇಳುತ್ತಾರೆ.
ಶಕ್ತಿ ಯೋಜನೆಯ ಮೂಲಕ ಮಹಿಳೆಯರು ದೂರದ ಪಟ್ಟಣಗಳಿಗೆ ತೆರಳಿ ಹೆಚ್ಚಿನ ಆದಾಯದ ಉದ್ಯೋಗ ಹೊಂದಲು ಸಹಕಾರಿಯಾಗಿರುವುದು ಮಾತ್ರವಲ್ಲದೇ ಹೆಚ್ಚಿನ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿನಿಯರಿಗೆ ತಮ್ಮ ಭವಿಷ್ಯದ ಕನಸುಗಳನ್ನು ನನಸು ಮಾಡಿಕೊಳ್ಳುವ ಅವಕಾಶವೂ ಆಗಿದೆ. ಅಲ್ಲದೇ ಮಹಿಳೆಯರು ಉದ್ಯೋಗ, ಪ್ರವಾಸ ಮತ್ತಿತರ ಚಟುವಟಿಕೆಗಳನ್ನು ಕೈಗೊಳ್ಳುವುದಕ್ಕೆ ಅನುಕೂಲವಾಗಿರುವುದರ ಜೊತೆಗೆ ಈ ಪ್ರಯಾಣ ವೆಚ್ಚದ ಉಳಿತಾಯದ ಮೊತ್ತವು ದೈನಂದಿನ ಬದುಕಿನಲ್ಲಿನ ಹಲವು ಅವಶ್ಯಕತೆಗಳನ್ನು ಪೂರೈಸಲು ನೆರವಾಗಿದೆ.
ಉಚಿತ ಪ್ರಯಾಣದ ಮೊದಲು ಸಾರಿಗೆಗಾಗಿ ಮಾಡುತ್ತಿದ್ದ ವೆಚ್ಚದ ಮೊತ್ತವು ವಿದ್ಯಾರ್ಥಿನಿಯರಿಗೆ ಕಾಲೇಜಿನ ಶುಲ್ಕ ಭರಿಸಲು, ಪಠ್ಯ ಪುಸ್ತಕ ಖರೀದಿಸಲು ನೆರವಾಗಿದ್ದರೆ, ರಾಜ್ಯದ ಬೇರೆ ಜಿಲ್ಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮತ್ತು ಖಾಸಗಿ ಉದ್ಯೋಗದಲ್ಲಿರುವ ಮಹಿಳೆಯರು ತಮ್ಮ ಕುಟುಂಬಗಳನ್ನು ಮತ್ತು ಪೋಷಕರು ತಮ್ಮ ಮಕ್ಕಳನ್ನು ನಿರಂತರವಾಗಿ ಭೇಟಿ ಮಾಡಿ ನೆಮ್ಮದಿಯ ಜೀವನ ಸಾಗಿಸಲು ನೆರವಾಗಿದೆ.
ಕೋಟ್:ದುಡಿಮೆಗಾಗಿ ನಿತ್ಯ ಬಸ್‌ಗಳಲ್ಲಿ ಸಂಚರಿಸುವ ಕಾರ್ಮಿಕ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯದಿಂದ ಅನುಕೂಲವಾಗಿದೆ. ಮಹಿಳಾ ಸಬಲೀಕರಣಕ್ಕೆ ಈ ಯೋಜನೆ ‘ಶಕ್ತಿ’ ತುಂಬಿದೆ.
– ಕಾವೇರಿ, ಕರ್ಚೇಡು ಗ್ರಾಮ, ಬಳ್ಳಾರಿ ತಾಲ್ಲೂಕು.
ಶಕ್ತಿ ಯೋಜನೆಯ ಉಚಿತ ಪ್ರಯಾಣದಿಂದಾಗಿ ನನಗೆ ಸಾಕಷ್ಟು ಅನುಕೂಲವಾಗಿದೆ. ನಾನು ಸಂಚರಿಸುವ ನನ್ನ ಪ್ರಯಾಣದ ವೆಚ್ಚ ಉಳಿತಾಯವಾಗಿದೆ. ಅದೇ ಹಣವನ್ನು ಪುಸ್ತಕಗಳನ್ನು ಖರೀದಿಸಲು ಬಳಸಿಕೊಳ್ಳುತ್ತಿದ್ದೇನೆ.
– ಮಣಿ, ಪ್ರಥಮ ಪಿಯುಸಿ ವಿದ್ಯಾರ್ಥಿನಿ, ತೆಗ್ಗಿನ ಬೂದಿಹಾಳ್ ಗ್ರಾಮ, ಬಳ್ಳಾರಿ ತಾಲ್ಲೂಕು.
ಶಕ್ತಿ ಯೋಜನೆಯಿಂದಾಗಿ ಸಾರಿಗೆ ನಿಗಮದ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಅಧಿಕವಾಗಿದ್ದು, ಈ ಹಿಂದೆ ಓಡಾಟ ನಡೆಸುತ್ತಿದ್ದ ಮಾರ್ಗದ ಬಸ್‌ಗಳಲ್ಲಿ ಮೊದಲಿಗಿಂತ ಹೆಚ್ಚಿನ ಆದಾಯ ಬರುತ್ತಿದೆ, ಇದು ನಿಗಮಕ್ಕೆ ಲಾಭದಾಯಕವಾಗಿದೆ. ಶಕ್ತಿ ಯೋಜನೆಯಿಂದಾಗಿ ನಿಗಮದ ಮೂಲಕ ಮಹಿಳಾ ಪ್ರಯಾಣಿಕರಿಗೆ, ಜಿಲ್ಲೆಯ ಸಾರ್ವಜನಿಕರಿಗೆ ಇನ್ನೂ ಹೆಚ್ಚಿನ ಉತ್ತಮ ಸೇವೆ ನೀಡಲು ಸಾಧ್ಯವಾಗಿದೆ ಎಂದು ವಿಭಾಗೀಯ ಅಧಿಕಾರಿಗಳು ತಿಳಿಸಿದ್ದಾರೆ.