ಆಂಧ್ರದ ಒಂದೇ ಗ್ರಾಮದಲ್ಲಿ 37 ಕ್ಯಾನ್ಸರ್‌ ಕೇಸ್‌!

Ravi Talawar
ಆಂಧ್ರದ ಒಂದೇ ಗ್ರಾಮದಲ್ಲಿ 37 ಕ್ಯಾನ್ಸರ್‌ ಕೇಸ್‌!
WhatsApp Group Join Now
Telegram Group Join Now

ರಾಜಮಹೇಂದ್ರವರಂ/ಬಿಕ್ಕವೋಲು (ಆಂಧ್ರಪ್ರದೇಶ): ಪೂರ್ವ ಗೋದಾವರಿ ಜಿಲ್ಲೆಯ ಬಿಕ್ಕವೋಲು ವ್ಯಾಪ್ತಿಯ ಬಲಭದ್ರಾಪುರಂ ಗ್ರಾಮದಲ್ಲಿ ಆರೋಗ್ಯ ಅಧಿಕಾರಿಗಳಿಂದ ಮನೆಯಿಂದ ಮನೆಗಳಿಗೆ ನಡೆದ ಸಮೀಕ್ಷೆಯಲ್ಲಿ ಕ್ಯಾನ್ಸರ್‌ನ ಶಂಕಿತ ಲಕ್ಷಣಗಳಿರುವ 37 ಜನರನ್ನು ಗುರುತಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅಸಾಮಾನ್ಯವಾಗಿ ಹೆಚ್ಚಿನ ಸಂಖ್ಯೆಯ ಕ್ಯಾನ್ಸರ್ ಪ್ರಕರಣಗಳು ವರದಿಯಾಗಿರುವ ಪ್ರದೇಶದಲ್ಲಿ ವೈದ್ಯಕೀಯ ಶಿಬಿರಗಳು ಮತ್ತು ರೋಗನಿರ್ಣಯ ಪರೀಕ್ಷೆಗಳನ್ನು ತೀವ್ರಗೊಳಿಸಲಾಗುತ್ತಿದೆ.

ಈನಾಡು ಹಾಗೂ ಈಟಿವಿಯಲ್ಲಿ ಪ್ರಕಟವಾದ ವಿವರವಾದ ವರದಿಗಳ ನಂತರ, ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು, ಬದುಕುಳಿದವರು ಮತ್ತು ರೋಗಕ್ಕೆ ಬಲಿಯಾದವರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ಜಿಲ್ಲಾಡಳಿತವು ಕಳೆದ ಎರಡು ದಿನಗಳಲ್ಲಿ 31 ತಂಡಗಳನ್ನು ನಿಯೋಜನೆ ಮಾಡಿದೆ.

ಗ್ರಾಮ ತಲುಪಿದ ತಜ್ಞರ ತಂಡಗಳು: ಜಿಎಸ್‌ಎಲ್ ಆಸ್ಪತ್ರೆಯ ಮೇಲ್ವಿಚಾರಣೆಯಲ್ಲಿ ಇಂದು ರೋಗನಿರ್ಣಯ ಪರೀಕ್ಷೆಗಳನ್ನು ನಡೆಸಲಾಗುವುದು. ವಿಶಾಖಪಟ್ಟಣಂನ ಹೋಮಿ ಬಾಬಾ ಕ್ಯಾನ್ಸರ್ ಸಂಶೋಧನಾ ಸಂಸ್ಥೆಯ ತಂಡಗಳು ಮತ್ತು ಸಾಂಕ್ರಾಮಿಕವಲ್ಲದ ರೋಗಗಳ (NCD) ಬಗ್ಗೆ ಪರಿಣತಿ ಹೊಂದಿರುವ ಸರ್ಕಾರಿ ವೈದ್ಯರು ಈ ಪ್ರಕ್ರಿಯೆಯಲ್ಲಿ ಸಹಾಯ ಮಾಡಲು ಆಗಮಿಸಿದ್ದಾರೆ. ಭಾನುವಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶಕರು ವೈದ್ಯಕೀಯ ಶಿಬಿರಗಳನ್ನು ಪರಿಶೀಲಿಸಿದರು. ಮತ್ತು ವೈದ್ಯರೊಂದಿಗೆ ಪರಿಸ್ಥಿತಿ ಕುರಿತು ಸಮಾಲೋಚನೆ ನಡೆಸಿದರು. ಕಾಕಿನಾಡ ರಂಗರಾಯ ವೈದ್ಯಕೀಯ ಕಾಲೇಜಿನ ಮತ್ತು 31 ಪಿಎಚ್​ಸಿ ವೈದ್ಯರು ಸಹ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.

ಪ್ರಸ್ತುತ 23 ಜನರಿಗೆ ಚಿಕಿತ್ಸೆ: ಅಧಿಕಾರಿಗಳ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಗ್ರಾಮದ 69 ಕ್ಯಾನ್ಸರ್ ರೋಗಿಗಳು ಎನ್​ಟಿಆರ್ ವೈದ್ಯಕೀಯ ಸೇವೆ ಮತ್ತು ಆರೋಗ್ಯಶ್ರೀ ಮೂಲಕ ಚಿಕಿತ್ಸೆ ಪಡೆದಿದ್ದಾರೆ. ಪ್ರಸ್ತುತ 23 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ 10 ಜನರು ತೀವ್ರ ಅಸ್ವಸ್ಥರಾಗಿದ್ದಾರೆ. ಸಮಸ್ಯೆಯ ಪೂರ್ಣ ಪ್ರಮಾಣವನ್ನು ಅರ್ಥಮಾಡಿಕೊಳ್ಳಲು ಅಧಿಕಾರಿಗಳು ಈಗ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದವರ ಡೇಟಾ ಸಂಗ್ರಹಿಸುತ್ತಿದ್ದಾರೆ. ಕುಟುಂಬದ ಅನುವಂಶಿಕ ಹಿನ್ನೆಲೆ ಆಹಾರ ಪದ್ಧತಿ ಮತ್ತು ಪ್ರಸ್ತುತ ಆರೋಗ್ಯ ಸ್ಥಿತಿಗಳು ಸೇರಿದಂತೆ ವಿವರವಾದ ಮಾಹಿತಿ ಸಂಗ್ರಹಿಸಲು ವೈದ್ಯಕೀಯ ತಂಡಗಳು ಈ ಕುಟುಂಬಗಳನ್ನು ಭೇಟಿ ಮಾಡುತ್ತಿವೆ. ಕಳೆದ ಎರಡು ದಿನಗಳಲ್ಲಿ 2,803 ಮನೆಗಳಿಗೆ ಭೇಟಿ ನೀಡಲಾಗಿದೆ. 8,830 ಜನರನ್ನು ಪರೀಕ್ಷಿಸಲಾಗಿದೆ ಎಂದು ಎಸ್​ಪಿಎಂ ಮುಖ್ಯಸ್ಥ ಡಾ. ಸುಜಾತಾ ತಿಳಿಸಿದರು.

ದಾರಿತಪ್ಪಿಸುವ ವರದಿಗಳ ಬಗ್ಗೆ ಶಾಸಕರ ಖಂಡನೆ: ಸ್ಥಳೀಯ ಆರೋಗ್ಯ ಅಧಿಕಾರಿಗಳು ಸಲ್ಲಿಸಿದ ದಾರಿತಪ್ಪಿಸುವ ವರದಿಗಳ ಬಗ್ಗೆ ಅನಪರ್ತಿ ಶಾಸಕ ನಲ್ಲಮಿಲ್ಲಿ ರಾಮಕೃಷ್ಣ ರೆಡ್ಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ‘ಎರಡು ದಿನಗಳ ಹಿಂದೆ ಸ್ಥಳೀಯ ವೈದ್ಯರು ಕೇವಲ ಆರು ಕ್ಯಾನ್ಸರ್ ಪ್ರಕರಣಗಳಿವೆ ಎಂದು ಹೇಳಿದ್ದರು. ಈಗ ಅವರು NTR ವೈದ್ಯಕೀಯ ಸೇವಾ ವರದಿಗಳ ಆಧಾರದ ಮೇಲೆ 23 ಪ್ರಕರಣಗಳನ್ನು ಹೇಳುತ್ತಾರೆ. ಖಾಸಗಿ ಆಸ್ಪತ್ರೆಗಳ ಪ್ರಕರಣಗಳನ್ನು ಇದರಲ್ಲಿ ಏಕೆ ಸೇರಿಸಲಾಗಿಲ್ಲ’ ಎಂದು ಅವರು ಪ್ರಶ್ನಿಸಿದರು.

WhatsApp Group Join Now
Telegram Group Join Now
Share This Article