ರಾಮದುರ್ಗ: ಉತ್ತಮ ಆರೋಗ್ಯ ಹೊಂದಲು ಪ್ರತಿಯೊಬ್ಬರು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಕ್ರೀಡೆ ಕೇವಲ ಪದಕ ಮತ್ತು ಪ್ರಶಸ್ತಿಗಳ ಸಂಪಾದನೆಗೆ ಮಾತ್ರ ಸೀಮಿತವಾಗಬಾರದು ಎಂದು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.
ತಾಲೂಕಿನ ಚಂದರಗಿಯ ಎಸ್.ಎಂ. ಕಲೂತಿ ಸಂಯುಕ್ತ ಕ್ರೀಡಾ ವಸತಿ ಮಹಾವಿದ್ಯಾಲಯದಲ್ಲಿ ಜರುಗಿದ ರಾಷ್ಟ್ರ ಮಟ್ಟದ ಅಟ್ಯಾ-ಪಟ್ಯಾ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ಕ್ರೀಡಾ ಪಟು ತನ್ನ ಸಾಮರ್ಥ್ಯವನ್ನು ಒರೆಗೆ ಹಚ್ಚುವುದರ ಜೊತೆಗೆ ಕ್ರೀಡಾ ಸ್ಪೂರ್ತಿ ಮೆರೆಯಬೇಕು ಎಂದ ಅವರು, ಚಂದರಗಿಯ ಈ ಶಾಲೆಯು ಈ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಮೂಲಕ ದೇಶಕ್ಕೆ ಶ್ರೇಷ್ಟ ಕ್ರೀಡಾ ಪಟುಗಳನ್ನು ನೀಡುತ್ತಿದೆ ಎಂದು ಶ್ಲಾಘಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಚೇತನ ಆರ್ ಅವರು ಮಾತನಾಡಿ, ಕ್ರೀಡಾಪಟುಗಳು ಸೋಲುಗಳನ್ನು ಎದುರಿಸಿ ಪರಿಶ್ರಮ, ತ್ಯಾಗ, ಸಮರ್ಪನಾ ಭಾವದಿಂದ ಸಾಧನೆ ತೋರಬೇಕು. ಮುಖ್ಯವಾಗಿ ಈ ನೆಲದಲ್ಲಿ ಶ್ರೇಷ್ಠ ಕ್ರೀಡಾ ಸಂಸ್ಕೃತಿ ಇದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸ್ಪೋಕೋ ಸಂಸ್ಥೆಯ ಅಧಕ್ಷೆ ಮೃಣಾಲಿನಿ ಪಟ್ಟಣ ಮಾತನಾಡಿದರು. ಸೋಕೋ ಸಂಸ್ಥೆಯ ಸಂಸ್ಥಾಪಕ ಎಸ್.ಎಂ. ಕಲೂತಿ, ಉಪಾಧ್ಯಕ್ಷ ಮಹೇಶ ಭಾತೆ, ಭಾರತೀಯ ಅಟ್ಯಾ-ಪಟ್ಯಾ ಒಕ್ಕೂಟದ ಪ್ರಭಾರ ಅಧ್ಯಕ್ಷ ವಿ. ಶಿವಕುಮಾರ, ಕಾರ್ಯದರ್ಶಿ ಡಿ.ಪಿ. ಕವೀಶ್ವರ, ಕರ್ನಾಟಕ ಅಟ್ಯಾ-ಪಟ್ಯಾ ಒಕ್ಕೂಟದ ಅಧ್ಯಕ್ಷ ಆರ್.ಎ. ದೇಸಾಯಿ, ಸ್ಪೋಕೋ ಸಂಸ್ಥೆಯ ನಿರ್ದೇಶಕರಾದ ರಾಜೇಶ್ವರಿ ಯಾದವಾಡ, ಕೆ.ಎಸ್. ಉಮರಾಣಿ, ಎಸ್.ಆರ್. ನವರಕ್ಕಿ, ಎಸ್.ಬಿ. ಯರಗನವಿ, ಎಂ.ಎಚ್. ಹೊನ್ನನಾಯಕನವರ, ಎಸ್.ಎನ್. ಅಡಗಿಮನಿ, ಜೆ.ವಿ. ಮುರಗೋಡ ಉಪಸ್ಥಿತರಿದ್ದರು.
ದೇಶದ ವಿವಿಧ ರಾಜ್ಯಗಳಿಂದ ೧೮ ಪುರುಷರ ಹಾಗೂ ೧೪ ಮಹಿಳೆಯರ ಒಟ್ಟು ೬೫೦ ಕ್ರೀಡಾಪಟುಗಳು ಮೂರು ದಿನಗಳ ಕಾಲ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.
ವ್ಯವಸ್ಥಾಪಕ ಜೆ.ಬಿ. ಮೇಟಿ ಸ್ವಾಗತಿಸಿದರು. ಪ್ರಾಚಾರ್ಯ ಸತೀಶ ಪಾಟೀಲ ಅತಿಥಿಗಳನ್ನು ಪರಿಚಯಿಸಿದರು. ಪಿ.ಕೆ. ಪಾಟೀಲ ಸಂಸ್ಥೆಯ ಕಿರು ಪರಿಚಯ ಮಾಡಿದರು. ಶಿಕ್ಷಕಿಯರಾದ ಜಯಶ್ರೀ ಹಿರೇಮಠ, ರಶ್ಮಿ ಗೌಡರ, ಎಂ.ಎಂ. ಗೋರಿಖಾನ ನಿರೂಪಿಸಿದರು. ಐ.ಎಸ್. ಸೂಳಿಭಾವಿ ವಂದಿಸಿದರು.
ಪ್ರತಿಯೊಬ್ಬರು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು : ಪಟ್ಟಣ
