ಬೆಂಗಳೂರು, ಆಗಸ್ಟ್ 1: ವಿದೇಶಗಳಲ್ಲಿರುವ ತನ್ನ ಶಾಖಾ ಘಟಕಗಳಿಂದ ಸೇವೆ ಪಡೆದದ್ದಕ್ಕೆ ಇನ್ಫೋಸಿಸ್ ಜಿಎಸ್ಟಿ ಪಾವತಿಸಿಲ್ಲ ಎಂದು ತೆರಿಗೆ ಇಲಾಖೆ ಆರೋಪಿಸಿದೆ. 2017ರಿಂದ 2022ರವರೆಗೆ ಐದು ವರ್ಷದಲ್ಲಿ ಬರೋಬ್ಬರಿ 32,403.46 ಕೋಟಿ ರೂ ಮೊತ್ತದ ಐಜಿಎಸ್ಟಿ ಪಾವತಿಸಬೇಕು ಎಂದು ಇನ್ಫೋಸಿಸ್ಗೆ ಬೆಂಗಳೂರಿನ ಜಿಎಸ್ಟಿ ಅಧಿಕಾರಿಗಳು ನೋಟೀಸ್ ಕೊಟ್ಟಿದ್ದಾರೆ.
ಕುತೂಹಲ ಎಂದರೆ ಬಾಕಿ ಇದೆ ಎನ್ನಲಾದ ಇಷ್ಟು ಐಜಿಎಸ್ಟಿ ಹಣವು ಇನ್ಫೋಸಿಸ್ನ ಐದು ವರ್ಷದ ಲಾಭಕ್ಕೆ ಸಮ ಎನ್ನಲಾಗಿದೆ. ಇನ್ಫೋಸಿಸ್ ಸಂಸ್ಥೆ ಜಿಎಸ್ಟಿ ಪ್ರಾಧಿಕಾರದ ಈ ಟ್ಯಾಕ್ಸ್ ಡಿಮ್ಯಾಂಡ್ ನೋಟೀಸ್ ಬಗ್ಗೆ ಪ್ರತಿಕ್ರಿಯಿಸಿದ್ದು, ತಾನು ಯಾವುದೇ ತೆರಿಗೆ ನಿಯಮ ಉಲ್ಲಂಘಿಸಿಲ್ಲ, ಅಥವಾ ಬಾಕಿ ಉಳಿಸಿಕೊಂಡಿಲ್ಲ ಎಂದು ಷೇರು ವಿನಿಯಮ ಕೇಂದ್ರಕ್ಕೆ ಸಲ್ಲಿಸಿದ ಫೈಲಿಂಗ್ನಲ್ಲಿ ತಿಳಿಸಿದೆ.
ಇನ್ಫೋಸಿಸ್ ವಿದೇಶಗಳಲ್ಲಿ ಬ್ರ್ಯಾಂಚ್ ಆಫೀಸ್ಗಳನ್ನು ಸ್ಥಾಪಿಸಿದೆ. ಆ ಶಾಖಾ ಕಚೇರಿಗಳಿಂದ ಪಡೆದ ಸರಬರಾಜುಗಳಿಗೆ ಸಂಸ್ಥೆ ಹಣ ಪಾವತಿಸಿದೆ. 2017ರ ಜುಲೈನಿಂದ ಆರಂಭವಾಗಿ 2021-22ರ ಹಣಕಾಸು ವರ್ಷದವರೆಗೆ ರಿವರ್ಸ್ ಚಾರ್ಜ್ ಮೆಕ್ಯಾನಿಸಂ ಅಡಿಯಲ್ಲಿ ಇನ್ಫೋಸಿಸ್ ಸಂಸ್ಥೆ 32,403.46 ಕೋಟಿ ರೂ ಐಜಿಎಸ್ಟಿ ಪಾವತಿಸಬೇಕಿತ್ತು… ಇನ್ಫೋಸಿಸ್ ಸಂಸ್ಥೆ ತನ್ನ ಎಕ್ಸ್ಪೋರ್ಟ್ ಇನ್ವಾಯ್ಸ್ ಅಡಿಯಲ್ಲಿ ಆ ವೆಚ್ಚಗಳನ್ನು ತೋರಿಸಿದೆ ಎಂದು ಕರ್ನಾಟಕ ರಾಜ್ಯ ಜಿಎಸ್ಟಿ ಪ್ರಾಧಿಕಾರ ತನ್ನ ಟ್ಯಾಕ್ಸ್ ಡಿಮ್ಯಾಂಡ್ ನೋಟೀಸ್ನಲ್ಲಿ ತಿಳಿಸಿದೆ.