ಬೆಂಗಳೂರು, ನವೆಂಬರ್ 17: ಸೈಬರ್ ವಂಚನೆ, ಡಿಜಿಟಲ್ ಅರೆಸ್ಟ್ ಇತ್ಯಾದಿ ಹೆಸರಿನಲ್ಲಿ ಹಣ ಎಗರಿಸುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿವೆ. ಡಿಜಿಟಲ್ ಅರೆಸ್ಟ್ ವಂಚನೆಗೆ ಒಳಗಾಗಿ ಬೆಂಗಳೂರಿನ ಮಹಿಳಾ ಟೆಕ್ಕಿಯೊಬ್ಬರು ಬರೋಬ್ಬರಿ 31.83 ಕೋಟಿ ರೂ. ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ಇದು ಕರ್ನಾಟಕದಲ್ಲೇ, ಡಿಜಿಟಲ್ ಅರೆಸ್ಟ್ ಪ್ರಕರಣಗಳಲ್ಲಿ ವ್ಯಕ್ತಿಯೊಬ್ಬರು ಕಳೆದುಕೊಂಡ ಗರಿಷ್ಠ ಮೊತ್ತ ಎಂಬುದಾಗಿ ಪೊಲೀಸ್ ಮೂಲಗಳು ಹೇಳಿರುವುದಾಗಿ ವರದಿಯಾಗಿದೆ.
ಇಂದಿರಾನಗರದ ನಿವಾಸಿ, 7 ವರ್ಷ ವಯಸ್ಸಿನ ಮಹಿಳಾ ಟೆಕ್ಕಿಯನ್ನು ಸೈಬರ್ ಅಪರಾಧಿಗಳು ಆರು ತಿಂಗಳಿಗೂ ಹೆಚ್ಚು ಕಾಲ ನಿರಂತರ ಕಣ್ಗಾವಲಿನಲ್ಲಿರಿಸಿದ್ದರು. ಅಲ್ಲದೆ, ಹಣ ದೋಚಿ ನಂತರ ಹಠಾತ್ತನೆ ಸಂಪರ್ಕ ಕಡಿತಗೊಳಿಸಿದ್ದರು ಎಂದು ಹಿರಿಯ ಸೈಬರ್ ಅಪರಾಧ ತನಿಖಾಧಿಕಾರಿಯೊಬ್ಬರ ಹೇಳಿಕೆ ಉಲ್ಲೇಖಿಸಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.
2024 ರ ಸೆಪ್ಟೆಂಬರ್ 15 ರಂದು ಮಹಿಳೆಗೆ ಕೊರಿಯರ್ ಸೇವೆಯಾದ ಡಿಎಚ್ಎಲ್ನಿಂದ ಬಂದವನೆಂದು ಹೇಳಿಕೊಂಡ ವ್ಯಕ್ತಿಯೊಬ್ಬ ಕರೆ ಮಾಡಿದ್ದಾನೆ. ಆಕೆಯ ಹೆಸರಿನಲ್ಲಿ ಮೂರು ಕ್ರೆಡಿಟ್ ಕಾರ್ಡ್ಗಳು, ನಾಲ್ಕು ಪಾಸ್ಪೋರ್ಟ್ಗಳು ಮತ್ತು ನಿಷೇಧಿತ MDMA ಮಾದಕ ದ್ರವ್ಯಗಳನ್ನು ಒಳಗೊಂಡಿರುವ ಒಂದು ಪ್ಯಾಕೇಜ್ ಮುಂಬೈನ ಅಂಧೇರಿಯಲ್ಲಿರುವ ಡಿಎಚ್ಎಲ್ ಕೇಂದ್ರಕ್ಕೆ ಬಂದಿದೆ ಎಂದು ಹೇಳಿದ್ದಾನೆ. ಆದರೆ, ತಾನು ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ಕೊರಿಯರ್ ಜೊತೆ ಯಾವುದೇ ಸಂಪರ್ಕವಿಲ್ಲ ಎಂದು ಆಕೆ ಹೇಳಿದ್ದಾಳೆ. ಆಗ, ಫೋನ್ ಸಂಖ್ಯೆ ಪ್ಯಾಕೇಜ್ಗೆ ಲಿಂಕ್ ಆಗಿರುವುದರಿಂದ ಇದು ಸೈಬರ್ ಅಪರಾಧವಾಗಿರಬಹುದು ಎಂದು ಕರೆ ಮಾಡಿದವ ಹೇಳಿಕೊಂಡಿದ್ದಾನೆ. ಈ ವಿಷಯದ ಬಗ್ಗೆ ಸೈಬರ್ ಅಪರಾಧ ಸೆಲ್ಗೆ ದೂರು ನೀಡುವಂತೆ ಆಕೆಯನ್ನು ಕೇಳಿಕೊಂಡಿದ್ದಾನೆ. ಆಕೆ ಪ್ರತಿಕ್ರಿಯಿಸುವ ಮೊದಲು, ಕರೆಯನ್ನು ಸಿಬಿಐ ಅಧಿಕಾರಿಯ ಸೋಗಿನಲ್ಲಿರುವ ವ್ಯಕ್ತಿಗೆ ವರ್ಗಾಯಿಸಲಾಗಿತ್ತು ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಉಲ್ಲೇಖಿಸಿದೆ.


