ಯರಗಟ್ಟಿ: ರೇಬೀಸ್ ರೋಗವು ವೈರಾಣುವಿನಿಂದ ಹರಡುವ ಸೊಂಕು ರೋಗವಾಗಿದ್ದು, ಗುಣಪಡಿಸಲು ಯಾವುದೇ ರೀತಿಯ ಆರೋಗ್ಯ ಚಿಕಿತ್ಸೆ ಇಲ್ಲದ ಕಾರಣ ನಾಯಿಗಳಿಗೆ ಲಸಿಕೆಯನ್ನು ಕೊಡಿಸುವ ಮೂಲಕ ಸುರಕ್ಷತಾ ಕ್ರಮಗಳನ್ನು ವಹಿಸಬೇಕಾಗಿದೆ ಎಂದು ಪಶು ವೈದ್ಯಾಧಿಕಾರಿ ಜಾಕೀರಹುಸೇನ್ ದೊಡಮನಿ ಹೇಳಿದರು.
ಸಮೀಪದ ತಲ್ಲೂರ ಗ್ರಾಮದ ಬಸವೇಶ್ವರ ಯುವಕ ಮಂಡಳ ಪ್ರೌಡಶಾಲೆ ಹಾಗೂ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಪಂಚಾಯತ ಬೆಳಗಾವಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಯರಗಟ್ಟಿ ಆಶ್ರಯದಲ್ಲಿ ರೇಬೀಸ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೇಬೀಸ ರೋಗವು ಹುಚ್ಚು ನಾಯಿಗಳಲ್ಲಿ ಉತ್ಪತ್ತಿಯಾಗುವ ಲಾಲಾರಸದಿಂದ ವೈರಾಣುಗಳ ಮೂಲಕ ಹರಡುವ ಮಾರಣಾಂತಿಕ ರೋಗವಾಗಿದೆ.
ವಿದ್ಯಾರ್ಥಿಗಳು, ಸಾರ್ವಜನಿಕರು ರೇಬೀಸ್ ರೋಗದ ಬಗ್ಗೆ ಜಾಗೃತಿ ಹೊಂದಬೇಕು. ಎಲ್ಲ ನಾಯಿಗಳಿಗೆ ಉಚಿತ ರೇಬೀಸ್ ಲಸಿಕೆಯನ್ನು ಹಾಕಲಾಗುತ್ತದೆ ಎಂದರು.
ಮುಖ್ಯಶಿಕ್ಷಕ ರಾಜಶೇಖರ ದುಂಡನಕೊಪ್ಪ ಮಾತನಾಡಿ, ನಾಯಿಕಡಿತದಿಂದಲೇ ರೇಬೀಸ್ ಹರಡುತ್ತದೆ. ನಾಯಿ ಕಡಿತಕ್ಕೆ ಒಳಪಟ್ಟ ಭಾಗವನ್ನು ತಕ್ಷಣವೇ ಸಾಬೂನು ಅಥವಾ ಶುದ್ಧ ನೀರಿನಿಂದ ತೊಳೆಯುವ ಮೂಲಕ ಪ್ರಾಥಮಿಕವಾಗಿ ಸುರಕ್ಷತಾ ಕ್ರಮವನ್ನು ಪಾಲಿಸಬೇಕು. ಸಾಕು ನಾಯಿಗಳಿಗೆ ನಿಯಮಿತವಾಗಿ ರೇಬೀಸ್ ನಿರೋಧಕ ಲಸಿಕೆಯನ್ನು ಹಾಕಿಸಬೇಕು ಎಂದರು.
ಮುಖ್ಯಶಿಕ್ಷಕ ಡಿ.ಡಿ.ಭೋವಿ, ಪಶುಸಕಿ ಸುಜಾತಾ ಸರದಾರ, ಗೋವಿಂದ ಲಮಾಣಿ, ಲಕ್ಷ್ಮಣ ಪಾಟೀಲ, ಎಸ್.ಎಫ್.ಮುರಗನ್ನವರ, ಎಸ್.ಎಂ.ಹಂಜಿ, ಮಲ್ಲಿಕಾರ್ಜುನ ಬದಾಮಿ, ಎಸ್.ಎಫ್.ಬಡಿಗೇರ, ಎ.ಜೆ.ಕಾಂಬಳೆ, ಜಿ.ಎ.ಕೊಟ್ರಶೇಟ್ಟಿ, ಪಿ.ಎ.ಸುಣಧೋಳಿ ಇತರರಿದ್ದರು.
ರೇಬೀಸ್ ಗೆ ಚಿಕಿತ್ಸೆ ಇಲ್ಲದ ಕಾರಣ ನಾಯಿಗಳಿಗೆ ಲಸಿಕೆ ಹಾಕಿಸಿ : ದೊಡಮನಿ
