ಇಂಡಿ: ತಾಲೂಕಿನ ಸುಕ್ಷೇತ್ರ ಲಚ್ಯಾಣದಲ್ಲಿ ಲಿಂಗೈಕ್ಯ ಶ್ರೀ ಸಿದ್ಧಲಿಂಗ ಮಹಾರಾಜರ ೯೮ನೇ ಪುಣ್ಯಾರಾಧನೆಯ ಅಂಗವಾಗಿ ಇದೇ ಸೆಪ್ಟಂಬರ್ ೧೩ ಹಾಗೂ ೧೪ ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಸೆ. ೧೩ ರಂದು ಬೆಳಿಗ್ಗೆ ೫ ಗಂಟೆಗೆ ಗುರು ಶ್ರೀ ಶಂಕರಲಿಂಗ ಮಹಾಶಿವಯೋಗಿಗಳ, ಸದ್ಗುರು ಶ್ರೀ ಸಂಗನಬಸವ ಮಹಾಶಿವಯೋಗಿಗಳ ಹಾಗೂ ಪವಾಡ ಪುರುಷ ಶ್ರೀ ಸಿದ್ಧಲಿಂಗ ಮಹಾರಾಜರ ಶಿಲಾ ಮೂರ್ತಿಗೆ ಭಕ್ತರಿಂದ ಅಭಿಷೇಕ ವಿಶೇಷ ಪೂಜೆ ನೆರವೇರಲಿದೆ. ಬಳಿಕ ಶ್ರೀ ಸಿದ್ಧಲಿಂಗ ಮಹಾರಾಜರು ಕಾಯಕಗೈದ ಸಂದರ್ಭದಲ್ಲಿ ಇದ್ದ ಬನ್ನಿಮರದ ಮೂಲ ಸ್ಥಳದಲ್ಲಿ ಬನ್ನಿ ಗಿಡ ನೆಡುವ ಕಾರ್ಯಕ್ರಮ ಪೂಜ್ಯರ ಸಾನಿಧ್ಯದಲ್ಲಿ ಕುಂಭಮೇಳ, ವಾದ್ಯಮೇಳದೊಂದಿಗೆ ಜರುಗಲಿದೆ.
ಸಂಜೆ ೬.೩೦ ಗಂಟೆಗೆ ತಿಮ್ಮಾಪುರ -ಮುದಗಲ್‌ನ ಕಲ್ಯಾಣ ಆಶ್ರಮದ ಶ್ರೀ ಮಹಾಂತ ಸ್ವಾಮೀಜಿ ಕಳೆದ ಆ. ೨೪ ರಿಂದ ನಿತ್ಯ ಸಂಜೆ ನಡೆಸಿಕೊಡುತ್ತಿರುವ ಬಂಥನಾಳದ ಶ್ರೀ ಸಂಗನಬಸವ ಮಹಾಸ್ವಾಮೀಜಿ ಜೀವನ ಚರಿತ್ರೆ ಕುರಿತ ಪುರಾಣ ಕಾರ್ಯಕ್ರಮದ ಮಹಾಮಂಗಲೋತ್ಸವ ಜರುಗಲಿದೆ. ಶಿರಹಟ್ಟಿಯ ಫಕಿರೇಶ್ವರ ಮಠದ ದಿಂಗಾಲೇಶ್ವರ ಮಹಾಸ್ವಾಮೀಜಿ, ಬಂಥನಾಳ ಹಾಗೂ ಲಚ್ಯಾಣ ಮಠದ ಪೀಠಾಧೀಶರಾದ ಶ್ರೀ ಡಾ. ವೃಷಭಲಿಂಗೇಶ್ವರ ಶಿವಯೋಗಿಗಳು, ಹಳಿಂಗಳಿಯ ಶಿವಾನಂದ ಮಹಾಸ್ವಾಮೀಜಿ ಸಾನಿಧ್ಯವಹಿಸಲಿದ್ದಾರೆ. ಶಾಸಕ ಯಶವಂತರಾಯಗೌಡ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಬಳಿಕ ರಾತ್ರಿ ೯ ಗಂಟೆಗೆ ವಿವಿಧ ಗ್ರಾಮದ ಭಜನಾ ತಂಡದವರಿಂದ ನಿರಂತರ ಸಪ್ತಾಹ ಭಜನೆ ನಡೆಯಲಿದೆ.
ಸೆ. ೧೪ ರಂದು ಬೆಳಿಗ್ಗೆ ೫ ಗಂಟೆಗೆ ಗುರು ಶಂಕರಲಿಂಗ ಮಹಾಶಿವಯೋಗಿಗಳ, ಸಿದ್ಧಲಿಂಗ ಮಹಾರಾಜರ ಶಿಲಾ ಮೂರ್ತಿಗೆ ಮಹಾರುದ್ರಾಭಿಷೇಕ ನಡೆಯಲಿದೆ. ಬಳಿಕ ೧೦ ಗಂಟೆಗೆ ಜಗದ್ಗುರು ಪೀಠದ ಪೀಠಾಧೀಶರಾದ ಶ್ರೀ ಡಾ. ವೃಷಭಲಿಂಗೇಶ್ವರ ಶಿವಯೋಗಿಗಳ ಪಾದಪೂಜಾ ಸಮಾರಂಭ ಜರುಗಲಿದೆ. ಹಳಿಂಗಳಿಯ ಶ್ರೀ ಶಿವಾನಂದ ಮಹಾಸ್ವಾಮೀಜಿ, ಹುಣಶ್ಯಾಳ ಪಿ.ಜಿಯ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದ ಶ್ರೀ ನಿಜಗುಣದೇವ ಮಹಾಸ್ವಾಮೀಜಿ, ಜಕನೂರಿನ ಶ್ರೀ ಸಿದ್ಧಲಿಂಗ ದೇವರು, ತುಂಗಳದ ಶ್ರೀ ಸಿದ್ಧಲಿಂಗ ಶಾಂಭವಿ ಆಶ್ರಮದ ಶಿವಶರಣೆ ಅನುಸೂಯಾದೇವಿ, ಹೂವಿನ ಹಿಪ್ಪರಗಿಯ ಪತ್ರಿಮಠದ ಶಿವಶರಣೆ ದ್ರಾಕ್ಷಾಯಣಿ ಅಮ್ಮನವರು, ಚಿಕ್ಕಪಡಸಲಗಿಯ ಶ್ರೀ ಸಿದ್ಧಲಿಂಗ ಆಶ್ರಮದ ಅಕ್ಕಮಹಾದೇವಿ ಅಮ್ಮನವರು, ಹಳಿಂಗಳಿಯ ಶರಣಬಸವ ದೇವರು ಈ ಕಾರ್ಯಕ್ರಮದ ಸಾನಿಧ್ಯವಹಿಸಲಿದ್ದಾರೆ.
ಬಳಿಕ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹಾಗೂ ಮಾಜಿ ಪೈಲ್ವಾನ್ ಚಂದಪ್ಪ ಯಳಮೇಲಿ ಅವರಿಂದ ಒಂದು ದಿನದ ಮಹಾ ಪ್ರಸಾದ ಸೇವೆ ನಡೆಯಲಿದೆ ಎಂದು ವ್ಯವಸ್ಥಾಪಕ ಸದ್ಭಕ್ತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಪೊಟೋ ಕ್ಯಾಪ್ಸನ್ ೦೮ ಇಂಡಿ ೦೧: ಲಚ್ಯಾಣದ ಪವಾರ ಪುರುಷ ಲಿಂಗೈಕ್ಯ ಶ್ರೀ ಸಿದ್ಧಲಿಂಗ ಮಹಾರಾಜರು.