ನವದೆಹಲಿ, ಜನವರಿ 1: ಉತ್ತರಪ್ರದೇಶದ ಪ್ರಯಾಗ್ರಾಜ್ (ಅಲಹಾಬಾದ್) ನಗರದಲ್ಲಿ ನಡೆಯಲಿರುವ 2025ರ ಮಹಾಕುಂಭ ಮೇಳದಲ್ಲಿ 3,000 ವಿಶೇಷ ರೈಲುಗಳು ಸಂಚರಿಸಲಿವೆ. ಈ ಪೈಕಿ 560 ಟ್ರೈನುಗಳು ರಿಂಗ್ ರೈಲ್ನಲ್ಲಿ ಕಾರ್ಯಾಚರಿಸಲಿವೆ. ಪ್ರಯಾಗ್ರಾಜ್ ಜಂಕ್ಷನ್, ಸುಬೇದಾರ್ಗಂಜ್, ನೈನಿ, ಪ್ರಯಾಗ್ರಾಜ್ ಛಿಯೋಕಿ, ಪ್ರಯಾಗ್ ಜಂಕ್ಷನ್, ಫಫಮಾವು (Phaphamau), ಪ್ರಯಾಗ್ರಾಜ್ ರಾಮಬಾಗ್, ಪ್ರಯಾಗ್ರಾಜ್ ಸಂಗಮ್ ಮತ್ತು ಝುನ್ಸಿ ಈ ಒಂಬತ್ತು ರೈಲ್ವೆ ನಿಲ್ದಾಣಗಳಲ್ಲಿ ಒಟ್ಟು 560 ಟಿಕೆಟಿಂಗ್ ಪಾಯಿಂಟ್ಗಳನ್ನು ನಿರ್ಮಿಸಲಾಗುತ್ತಿದೆ ಎನ್ನುವ ಮಾಹಿತಿ ಮಾಧ್ಯಮಗಳಿಗೆ ಲಭಿಸಿದೆ.
ಮಹಾಕುಂಭಕ್ಕೆ 3,000 ವಿಶೇಷ ಟ್ರೈನುಗಳು
ಈ ಟಿಕೆಟ್ ಕೌಂಟರ್ಗಳಲ್ಲಿ ಪ್ರತೀ ದಿನ ಹತ್ತು ಲಕ್ಷ ಟಿಕೆಟ್ಗಳನ್ನು ವಿತರಿಸಲಾಗುತ್ತದೆ. 15 ದಿನ ಮುಂಚಿತವಾಗಿ ಟಿಕೆಟ್ ಬುಕ್ ಮಾಡಲು ಅವಕಾಶ ನೀಡಲಾಗುತ್ತಿದೆ. ರೈಲ್ವೆ ಇಲಾಖೆ ಒಟ್ಟಾರೆ 10,000ಕ್ಕೂ ಅಧಿಕ ರೆಗ್ಯುಲರ್ ಟ್ರೈನುಗಳನ್ನು ಮಹಾಕುಂಭಕ್ಕೆ ವ್ಯವಸ್ಥೆ ಮಾಡಿದೆ. 3,000ಕ್ಕೂ ಅಧಿಕ ಸ್ಪೆಷಲ್ ಟ್ರೈನುಗಳು ಸಂಚರಿಸಲಿವೆ. ಈ ವಿಶೇಷ ಟ್ರೈನುಗಳ ಪೈಕಿ 1,800 ಟ್ರೈನುಗಳು ಅಲ್ಪ ದೂರಕ್ಕೆ ಸೀಮಿತವಾಗಿರುತ್ತವೆ. 700 ಟ್ರೈನುಗಳು ದೂರದ ಸ್ಥಳಗಳಿಗೆ ನಿಯೋಜಿತವಾಗಿವೆ. 560 ಟ್ರೈನುಗಳು ರಿಂಗ್ ರೈಲ್ನಲ್ಲಿ ಸಂಚರಿಸಲಿವೆ.