ದಾವಣಗೆರೆ: ಚನ್ನಗಿರಿಯಲ್ಲಿ ಪೊಲೀಸ್ ವಶದಲ್ಲಿದ್ದ ವ್ಯಕ್ತಿ ಸಾವನ್ನಪ್ಪಿದ ಪ್ರಕರಣ ಸಂಬಂಧ ಚನ್ನಗಿರಿ ಡಿವೈಎಸ್ಪಿ ಪ್ರಶಾಂತ ಮುನ್ನೊಳ್ಳಿ, ವೃತ್ತನಿರೀಕ್ಷಕ ನಿರಂಜನ ಬಿ ಹಾಗೂ ಎಸ್ಐ ಅಖ್ತರ್ ಅವರನ್ನು ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಆರೋಪಿತ ಅಧಿಕಾರಿಗಳನ್ನು ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ.
ಮೇ 24ರಂದು ಚನ್ನಗಿರಿಯಲ್ಲಿ ಪೊಲೀಸ್ ವಶದಲ್ಲಿದ್ದ ವ್ಯಕ್ತಿ ಸಾವನ್ನಪ್ಪಿದ್ದನು. ಮಟ್ಕಾ ಆಡಿಸುತ್ತಿದ್ದ ಆರೋಪದ ಮೇಲೆ ಆದಿಲ್ ಎಂಬಾತನನ್ನು ಠಾಣೆಗೆ ಕರೆತರಲಾಗಿತ್ತು. ಅದೊಂದು ಲಾಕ್ ಅಪ್ ಡೆತ್ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಅಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಮೃತಪಟ್ಟ ಆರೋಪಿ ಆದೀಲ್ ವಿರುದ್ಧ ಎಫ್ಐಆರ್ ಮಾಡದೇ, ಚನ್ನಗಿರಿ ಠಾಣೆಗೆ ಕರೆತರಲಾಗಿತ್ತು. ಒಬ್ಬ ಆರೋಪಿಯನ್ನು ಠಾಣೆಗೆ ಕರೆತರುವ ಮುನ್ನ ಪ್ರಕರಣ ದಾಖಲಾಗಿರಬೇಕು. ಆದರೆ ಅದನ್ನು ಮಾಡದೇ ಚನ್ನಗಿರಿ ಪೊಲೀಸರು ತಪ್ಪು ಮಾಡಿದ್ದಾರೆ ಎಂದು ಪ್ರಕರಣದ ಬಗ್ಗೆ ಮೈಸೂರಿನಲ್ಲಿ ಖುದ್ದು ಸಿಎಂ ಹೇಳಿಕೆ ನೀಡಿದ್ದರು.