ಹುನಗುಂದ: ನಕಲಿ ಪಿಎಚ್ ಡಿ ಹಾಗೂ ಅಂಗವಿಕಲ ಪ್ರಮಾಣ ಪತ್ರ ತಡೆಗೆ ಆಗ್ರಹಿಸಿ ಹುನಗುಂದ ಮತ್ತು ಇಳಕಲ್ ತಾಲ್ಲೂಕಿನ ಅರ್ಹತೆ ಹೊಂದಿದ ಅತಿಥಿ ಉಪನ್ಯಾಸಕರು ಪಟ್ಟಣದ ಸರ್ಕಾರಿ ಪ್ರಥಮ ಕಾಲೇಜಿನ ಪ್ರಾಚಾರ್ಯ ಸಿಕಂದರ್ ಧನ್ನೂರು ಅವರ ಮೂಲಕ ಉನ್ನತ ಶಿಕ್ಷಣ ಇಲಾಖೆ ಆಯುಕ್ತರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಅತಿಥಿ ಉಪನ್ಯಾಸಕ ಈರಣ್ಣ ಹುರಳಿ ಮಾತನಾಡಿ, ೨೦೨೫-೨೬ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಪದವಿ ಕಾಲೇಜಿಗೆ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಲು ಕಾಲೇಜು ಶಿಕ್ಷಣ ಇಲಾಖೆ ಯುಜಿಸಿ ವಿದ್ಯಾರ್ಹತೆ ಗಳಾದ ಕೆ- ಸೆಟ್/ ನೆಟ್/ಪಿಎಚ್ ಡಿ ಹೊಂದಿರುವುದು ಕಡ್ಡಾಯ ಎಂದು ಆದೇಶ ಹೊರಡಿಸಿದೆ. ಆದರೆ ಯುಜಿಸಿ ವಿದ್ಯಾರ್ಹತೆ ಹೊಂದದೆ ಇರುವವರು ಅತಿಥಿ ಉಪನ್ಯಾಸಕ ವೃತ್ತಿ ಪಡೆಯಬೇಕು ಹಾಗೂ ಹೆಚ್ಚು ಮಾಸಿಕ ವೇತನ ಪಡೆಯುವ ಹಂಬಲದಿಂದ ಅಕ್ರಮ ಮಾರ್ಗದ ಮೂಲಕ ಹೊರ ರಾಜ್ಯಗಳ ವಿಶ್ವವಿದ್ಯಾಲಯಗಳಿಂದ ನಕಲಿ ಪಿಎಚ್ ಡಿ ಪ್ರಮಾಣ ಪತ್ರಗಳನ್ನು ಕೊಂಡುತಂದು ಇಲಾಖೆಯ ಕಣ್ಣಿಗೆ ಮಣ್ಣೆರೆಚಿದ್ದಾರೆ. ಇದರಿಂದ ಪ್ರಾಮಾಣಿಕವಾಗಿ ಯುಜಿಸಿ ವಿದ್ಯಾರ್ಹತೆ ಪಡೆದ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಅಲ್ಲದೆ ಅಂಗವಿಕಲ ಪ್ರಮಾಣ ಪತ್ರ ಲಗತ್ತಿಸುವುದರಿಂದ ೧೦ ಅಂಕಗಳು ಬರುತ್ತವೆ ಎಂಬ ದುರಾಸೆಯಿಂದ ಯಾವುದೇ ನೂನ್ಯತೆ ಇಲ್ಲದಿದ್ದರೂ ಹಣ ಬಲದಿಂದ ನಕಲಿ ಅಂಗವಿಕಲ ಪ್ರಮಾಣ ಪತ್ರ ಕೊಂಡುತಂದು ಉದ್ಯೋಗವನ್ನು ಗಿಟ್ಟಿಸಿಕೊಳ್ಳು ವುದರ ನ್ಯಾಯಾಲಯಕ್ಕೆ ಮಣ್ಣೆರಚಿ ಕಾನೂನಿನ ಭಯವಿಲ್ಲದೆ ಅಕ್ರಮ ಮಾರ್ಗದ ಮೂಲಕ ಕೊಂಡು ತಂದ ನಕಲಿಗಳ ಹಾವಳಿ ಜಿಲ್ಲೆಯಲ್ಲಿ ಹೆಚ್ಚಾಗಿದೆ.
ಹೀಗಾಗಿ ಉನ್ನತ ಶಿಕ್ಷಣ ಇಲಾಖೆ ಇಂಥವರ ವಿರುದ್ಧ ಸೂಕ್ತ ಕಠಿಣ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಕಠಿಣ ಕ್ರಮ ಕೈಗೊಳ್ಳದಿದ್ದರೆ ಕಾನೂನಿನ ಮೊರೆ ಹೋಗುವುದಾಗಿ ಎಚ್ಚರಿಸಿದರು.
ಅತಿಥಿ ಉಪನ್ಯಾಸಕರಾದ ಎಲ್. ಜಿ. ಗಗ್ಗರಿ, ಸಂತೋಷ ಕಾಳಣ್ಣವರ, ಅಮರೇಶ ಗೌಡರ, ಹನಮಪ್ಪ ಕೋರಿ, ಮೈಲಾರಪ್ಪ ಬಿಲ್ಕರ್, ಬಸಯ್ಯ ಮಠಪತಿ, ನಿರುಪಾದ್ ಗುಡಿಮನಿ, ರಾಘವೇಂದ್ರ ಜುಂಜ ಮೊದಲಾದವರು ಇತರರಿದ್ದರು.
ನಕಲಿ ಪಿಎಚ್ ಡಿ ಹಾಗೂ ಅಂಗವಿಕಲ ಪ್ರಮಾಣ ಪತ್ರ ತಡೆಗೆ ಆಗ್ರಹಿಸಿ ಮನವಿ
