ನವದೆಹಲಿ, ಏಪ್ರಿಲ್ 18: ಕಾಂಗ್ರೆಸ್ ಪಕ್ಷದ ವಕ್ತಾರೆ ಸುಪ್ರಿಯಾ ಶ್ರೀನೇತ್ ಮತ್ತೊಮ್ಮೆ ವಿವಾದದ ಸುಳಿಗೆ ಸಿಲುಕಿದ್ದಾರೆ. ಛತ್ತೀಸ್ಗಡದ ಕಾಂಕೇರ್ನಲ್ಲಿ ಮೊನ್ನೆ ಮಂಗಳವಾರ (ಏ. 16) 29 ಮಾವೋವಾದಿ ಉಗ್ರರು ಬಿಎಸ್ಎಫ್ ಕಾರ್ಯಾಚರಣೆಯಲ್ಲಿ ಹತ್ಯೆಯಾಗಿದ್ದರು. ಸುಪ್ರಿಯಾ ಶ್ರೀನೇತ್ ಈ ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ತನಿಖೆಗೆ ಆಗ್ರಹಿಸಿದ್ದರು. ಈ ವೇಳೆ ಕಾರ್ಯಾಚರಣೆಯಲ್ಲಿ ಸತ್ತ ನಕ್ಸಲ್ ಉಗ್ರರನ್ನು ಸುಪ್ರಿಯಾ ಅವರು ಹುತಾತ್ಮರೆಂದು ಬಣ್ಣಿಸಿದ್ದಾರೆ. ಕಾಂಗ್ರೆಸ್ ವಕ್ತಾರೆಯ ಈ ಹೇಳಿಕೆಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರಜಾತಂತ್ರದ ಅವಹೇಳನವಾಗಿದೆ ಎಂದು ತಿರುಗೇಟು ನೀಡಿದೆ.
‘ಛತ್ತೀಸ್ಗಡದ ಅಮಾಯಕ ಜನರ ರಕ್ತ ಹರಿಸಿದ ನಕ್ಸಲರನ್ನು ಹುತಾತ್ಮರೆಂದು ಬಣ್ಣಿಸುವ ಮೂಲಕ ಕಾಂಗ್ರೆಸ್ನ ರಾಷ್ಟ್ರೀಯ ವಕ್ತಾರೆ ಸುಪ್ರಿಯಾ ಶ್ರೀನೇತ್ ಅವರು ಛತ್ತೀಸ್ಗಡ ಜನತೆ, ಪೊಲೀಸ್ ಪಡೆ ಮತ್ತು ಪ್ರಜಾತಂತ್ರ ವ್ಯವಸ್ಥೆಯನ್ನು ಲೇವಡಿ ಮಾಡಿದ್ದಾರೆ. ಈ ಪವಿತ್ರ ನಾಡಿನಲ್ಲಿ ನಿಮ್ಮ ಆಗಮನ ಸ್ವೀಕಾರಾರ್ಹವಲ್ಲ,’ ಎಂದು ಛತ್ತೀಸ್ಗಡ ಬಿಜೆಪಿ ಘಟಕ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.
ನಕ್ಸಲನ್ನು ಹುತಾತ್ಮರೆಂದ ಸುಪ್ರಿಯಾ ಶ್ರೀನೇತ್ ಹೇಳಿಕೆಯನ್ನು ಬಿಜೆಪಿ ನಾಯಕ ಶಹಜಾದ್ ಪೂನಾವಾಲ ಕಟುವಾಗಿ ಟೀಕಿಸಿದ್ದಾರೆ. ಕಾಂಗ್ರೆಸ್ಸಿಗರಿಂದ ಇಂಥದ್ದು ನಿರೀಕ್ಷಿತವೇ ಆಗಿದೆ ಎಂದಿದ್ದಾರೆ.
‘ಛತ್ತೀಸ್ಗಡದಲ್ಲಿ ಬಹಳ ಮುಖ್ಯವಾದ ಕಾರ್ಯಾಚರಣೆ ಆಗಿದೆ. 29 ನಕ್ಸಲರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಇದು ನಿಜಕ್ಕೂ ದೊಡ್ಡ ಸಾಧನೆಯೇ. ಆದರೆ, ಕಾಂಗ್ರೆಸ್ ಪಕ್ಷದವರು ಆ ನಕ್ಸಲರನ್ನು ಹುತಾತ್ಮರೆಂದು ಬಣ್ಣಿಸಿ ಭದ್ರತಾ ಪಡೆಗಳನ್ನು ಪ್ರಶ್ನೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಇದು ನಿರೀಕ್ಷಿತವೇ ಆದರೂ ಬಹಳ ಕ್ರೂರತನದಿಂದ ಕೂಡಿದ ಹೇಳಿಕೆ ಆಗಿದೆ,’ ಎಂದು ಬಿಜೆಪಿಯ ವಕ್ತಾರರೂ ಆಗಿರುವ ಶಹಜಾದ್ ಪೂನಾವಾಲ ಹೇಳಿದ್ದಾರೆ.