ರಾಮದುರ್ಗ: ಎಫ್.ಆರ್.ಎಸ್ ರದ್ದುಪಡಿಸಲು ಒತ್ತಾಯಿಸಿ ಪಟ್ಟಣದಲ್ಲಿ ಅಂಗನವಾಡಿ ನೌಕರರು ಕಪ್ಪು ಪಟ್ಟಿಯನ್ನು ಧರಿಸಿ, ಕಪ್ಪು ದಿನಾಚರಣೆ ಆಚರಿಸಿ ಶಿಶು ಅಭಿವೃದ್ದಿ ಅಧಿಕಾರಿಗಳ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು.
ದೇಶದಲ್ಲಿ ಅಪೌಷ್ಠಿಕ ಆಹಾರದಿಂದ ನರಳುತ್ತಿರುವ ಮಕ್ಕಳನ್ನು ರಕ್ಷಿಸಲು, ಗರ್ಭಿಣಿ, ಬಾನಂತಿಯರಿಗೆ ರಕ್ತ ಹೀನತೆಯಿಂದ ರಕ್ಷಿಸಲು ೧೯೭೫ ರಲ್ಲಿ ಸಮಗ್ರ ಬಾಲವಿಕಾಸ ಯೋಜನೆ ಜಾರಿಗೆ ಬಂದು ಇವತ್ತು ದೇಶದಲ್ಲಿ ರಕ್ತ ಹೀನತೆಯಿಂದ, ಅಪೌಷ್ಠಿಕ ಆಹಾರದಿಂದ ನರಳುತ್ತಿರುವವರ ಸಂಖ್ಯೆ ಕಡಿಮೆಯಾಗಿದೆ. ಇದಕ್ಕೆ ಅಂಗನವಾಡಿ ನೌಕರರು ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಈಗ ಕೇಂದ್ರ ಸರಕಾರ ಎಫ್.ಆರ್.ಎಸ್ (ಮುಖ ದೃಢೀಕರಣ) ತಂದು ಐ.ಸಿ.ಡಿ.ಎಸ್. ಯೋಜನೆಯನ್ನು ಬಲಹೀನ ಮಾಡಲು ಹೊರಟಿದೆ ಎಂದು ಕಾರ್ಮಿಕ ಮುಖಂಡ ಜಿ. ಎಂ. ಜೈನೆಖಾನ ಆರೋಪಿಸಿದರು.
ಕೂಡಲೇ ಎಫ್.ಆರ್.ಎಸ್ ನ್ನು ಕೇಂದ್ರ ಸರಕಾರ ರದ್ದುಪಡಿಸಬೇಕು. ಕಡಿತ ಮಾಡಿರುವ ಅನುದಾನವನ್ನು ವಾಪಸ್ಸ ಕೊಡಬೇಕು. ಸುಪ್ರಿಂ ಕೋರ್ಟ ಆದೇಶದನ್ವಯ ಅಂಗನವಾಡಿ ನೌಕರರನ್ನು ಖಾಯಂಗೊಳಿಸಬೇಕು ಹಾಗೂ ಸುಪ್ರಿಂ ಕೋರ್ಟ ಆದೇಶದನ್ವಯ ಎಲ್ಲರಿಗೂ ಗ್ರಾಚೂಟಿ ನೀಡಬೇಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ಎಫ್.ಆರ್.ಎಸ್ ನ್ನು ರದ್ದುಪಡಿಸದೇ ಇದ್ದರೆ ಸಂಬಂಧಪಟ್ಟ ಸಚಿವರ ಮನೆಗಳ ಮುಂದೆ ಮುಂಬರುವ ನವೆಂಬರ, ಡಿಸೆಂಬರನಲ್ಲಿ ಅನರ್ಧಿಷ್ಠ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಅಂಗನವಾಡಿ ನೌಕರರ ಸಂಘದ ತಾಲೂಕ ಅಧ್ಯಕ್ಷೆ ಸರಸ್ವತಿ ಮಾಳಶೆಟ್ಟಿ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ವಿಜಯಲಕ್ಷ್ಮೀ ಸಿದ್ಧಿಭಾಂವಿ, ಶಕುಂತಲಾ ನಾರಾಯಣಕರ, ಶಕುಂತಲಾ ಶಿರಸಂಗಿ, ಅನ್ನಪೂರ್ಣ ಚಿಕ್ಕಮಠ, ಇಂದ್ರಾ ಸುಟಿಗಾಲ ಮತ್ತು ಬೋರಮ್ಮಾ ತೆಕ್ಕಿ ಮುಂತಾದವರು ಉಪಸ್ಥಿತರಿದ್ದರು.