ರಾಮದುರ್ಗ,ಆ.೨೦: ಕಳೆದ ಮೂರು ದಿನಗಳಿಂದ ತಾಲೂಕಿನಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಮನೆಯ ಮೇಲ್ಛಾವಣಿ ಕುಸಿದು ವಯೋವೃದ್ದ ಸಾವನ್ನಪ್ಪಿದ ಘಟನೆ ರಾಮದುರ್ಗ ಪಟ್ಟಣದ ನಿಂಗಾಪೂರ ಪೇಠದಲ್ಲಿ ನಡೆದಿದೆ.
ಘಟನೆಯಲ್ಲಿ ಮೃತಪಟ್ಟ ವ್ಯಕ್ತಿ ನಿಂಗಾಪೂರ ಪೇಠೆಯ ವಾಮನ ಬಾಪೂ ಪವಾರ (೭೫) ಎಂಬಾತನಾಗಿದ್ದು, ಅಡುಗೆ ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಮಣ್ಣಿನ ಮೇಲ್ಛಾವಣಿ ನೆನೆದು ಬುಧವಾರ ಬೆಳಿಗ್ಗೆ ಕುಸಿದ ಪರಿಣಾಮ ವೃದ್ದ ವಾಮನ ಪವಾರ ಮಣ್ಣಿನಲ್ಲಿ ಹುದುಗಿ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ. ಈ ಘಟನೆಯ ಕುರಿತು ಮೃತ ವ್ಯಕ್ತಿಯ ಪುತ್ರ ಕೃಷ್ಣ ವಾಮನ ಪವಾರ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಘಟನಾ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ, ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ಮಣ್ಣಿನಲ್ಲಿ ಹೂತಿದ್ದ ವೃದ್ಧನ ಶವವನ್ನು ಹೊರ ತೆಗೆದು ಮುಂದಿನ ಪ್ರಕ್ರಿಯೇ ನಡೆಸಿದರು.
ಮನೆಯ ಮೇಲ್ಛಾವಣಿ ಕುಸಿದು ವಯೋವೃದ್ದ ಸಾವು
