ರಾಮದುರ್ಗ: ಖಾನಾಪೂರ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಅತ್ಯಧಿಕ ಮಳೆಯಿಂದಾಗಿ ನವೀಲುತೀರ್ಥ ಜಲಾಯಶಕ್ಕೆ ಒಳಹರಿವು ಸುಮಾರು ೧೦ ಸಾವಿರ ಕ್ಯೂಸೆಕ್ಸ್ ದಾಟಿದ್ದು, ಜಲಾಶಯ ಸಂಗ್ರಹ ಸಾಮರ್ಥ್ಯ ೨೦೭೯ ಅಡಿಗಳ ಪೈಕಿ ೨೦೭೭ ಅಧಿಕ ಅಡಿ ತಲುಪಿದ್ದು, ಹೀಗಾಗಿ ಇಂದು ಮತ್ತೇ ೧೦ ಸಾವಿರದಿಂದ ೧೨ ಸಾವಿರ ಕ್ಯೂಸೆಕ್ಸ್ ಗೆ ಹೆಚ್ಚಿಸಿದ್ದು, ನದಿ ಪಾತ್ರದ ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದೆ.
ತಾಲೂಕಿನಲ್ಲಿ ಹರಿದಿರುವ ಮಲಪ್ರಭೆ ಈಗ ತುಂಬಿ ಹರಿಯುತ್ತಿದ್ದು ಇನ್ನು ಹೆಚ್ಚಿನ ಪ್ರಮಾಣದ ನೀರನ್ನು ಹರಿಬಿಟ್ಟರೇ ಜನರೆಲ್ಲಾ ಬೇರೆ ಕಡೆಗೆ ಸಾಗುವದಾಗಿದೆ. ಇತ್ತಿಚೆಗೆ ಜಿಲ್ಲೆಯ ವಿವಿಧ ತಾಲೂಕಗಳಲ್ಲಿ ಪ್ರವಾಹದಿಂದ ಜನರು ತತ್ತರಿಸುವ ಪರಸ್ಥಿತಿ ನೋಡಲಾಗಿತ್ತು. ಈಗ ರಾಮದುರ್ಗ ತಾಲೂಕಿಗೆ ಬಂದೊದಗಿದೆ.
ಜಲಾಶಯದ ಗರಿಷ್ಟ ಮಟ್ಟ ೨೦೭೯.೫೦ ಅಡಿ ಇದ್ದು ಈಗ ಸಂಪೂರ್ಣ ಭರ್ತಿಯಾಗಲು ೨ ಅಡಿಯಷ್ಟು ಮಾತ್ರ ಬಾಕಿ ಇದ್ದು, ಮಂಗಳವಾರ ಜಲಾಶಯದಿಂದ ೧೨ ಸಾವಿರ ಕ್ಯೂಸೆಕ್ ನೀರನ್ನು ಬಿಡಲಾಗಿದೆ. ಮಳೆ ಹೆಚ್ಚಾದರೆ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
೧೨ ಸಾವಿರ ಕ್ಯೂಸೆಕ್ಸ್ ನೀರು ಬಿಟ್ಟ ಪರಿಣಾಮ ಪಟ್ಟಣದ ವೆಂಕಟೇಶ್ವರ ದೇವಸ್ಥಾನದ ಹತ್ತಿರದ ಹಳೇ ಸೇತುವೆ ಸಂಪೂರ್ಣ ಜಲಾವೃತಗೊಂಡಿದ್ದು, ಸಂಚಾರವನ್ನು ನಿಷೇದಿಸಲಾಗಿದೆ. ಅಲ್ಲದೇ ನದಿ ಪಾತ್ರಕ್ಕೆ ಹೊಂದಿಕೊಂಡಿರುವ ಅನೇಕ ಹೊಲಗಳಿಗೆ ನೀರು ನುಗ್ಗಿದ್ದು ಬೆಳೆಯಲ್ಲಾ ನೀರುಪಾಲಾಗಿವೆ. ಮತ್ತೇ ಮಳೆ ಹೆಚ್ಚಾಗಿ ಇನ್ನೂ ಹೆಚ್ಚಿನ ಪ್ರಮಾಣದ ನೀರನ್ನು ಹರಿಬಿಟ್ಟರೇ ರಾಮದುರ್ಗ ಪಟ್ಟಣದ ಪಡಕೋಟಿ, ಕಿಲಬನೂರ, ನೇಕಾರ ಪೇಠೆ ಸೇರಿದಂತೆ ತಾಲೂಕಿನ ಸಾಕಷ್ಟು ಹಳ್ಳಿಗಳು ಪ್ರವಾಹಕ್ಕೆ ತುತ್ತಾಗುವ ಸಾಧ್ಯತೆ ಇದೆ.
ಕೋಟ್:
ಈಗಾಗಲೇ ನದಿಗೆ ಹರಿಬಿಟ್ಟ ೧೨ ಸಾವಿರ ಕ್ಯೂಸೆಕ್ಸ್ ನೀರಿನಿಂದ ನದಿಪಾತ್ರದ ಯಾವುದೆ ಗ್ರಾಮಗಳ ಮನೆಗಳಿಗೆ ನೀರು ನುಗ್ಗಿಲ್ಲ. ರೈತರ ಜಮೀನುಗಳಿಗೆ ಮಾತ್ರ ನೀರು ನುಗ್ಗಿದ್ದು, ಒಳ ಹರಿವು ಪ್ರಮಾಣ ಹೆಚ್ಚಾದರಿಂದ ೧೦ ಸಾವಿರದಿಂದ ೧೨ ಸಾವಿರಕ್ಕೆ ಹೆಚ್ಚಿಸಲಾಗಿದೆ. ನೀರು ಹೆಚ್ಚಳಗೊಂಡರೇ ಯಾವ ಗ್ರಾಮ ಗ್ರಾಮಗಳಿಗೆ ಪ್ರವಾಹ ಉಂಟಾಗಲಿದೆ ಎಂಬುವದನ್ನು ನೋಡಿಕೊಂಡು ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ತಾಲೂಕಾ ಆಡಳಿತದಿಂದ ಅಗತ್ಯ ಕ್ರಮವಹಿಸಲಾಗುವದು.
ಪ್ರಕಾಶ ಹೊಳೆಪ್ಪಗೋಳ, ತಹಶೀಲ್ದಾರರು ರಾಮದುರ್ಗ.