ರಾಮದುರ್ಗ: ಹಾಲುಮತ ಸಮಾಜ ಬಾಂಧವರು ಸಂಘಟಿತರಾದಲ್ಲಿ ಮಾತ್ರ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಪ್ರಾತಿನಿಧ್ಯ ಪಡೆಯಲು ಸಾಧ್ಯವಿದೆ. ಸಮಾಜ ಬಾಂಧವರು ಸಂಘಟನೆಗೆ ಮಹತ್ವ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಪಟ್ಟಣದ ಹೊರವಲಯದ ಪ್ರಗತಿ ಕನ್ವೆನಷನ್ ಹಾಲನಲ್ಲಿ ತಾಲೂಕಾ ಪ್ರದೇಶ ಕುರುಬರ ಸಂಘ, ತಾಲೂಕಾ ಕುರುಬ ನೌಕರರ ಸಂಘದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜನ್ಮ ದಿನೋತ್ಸವ ಹಾಗೂ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಾಲುಮತ ಸಮಾಜ ಬಾಂಧವರು ಸಂಗೊಳ್ಳಿ ರಾಯಣ್ಣ ಜನ್ಮದಿನೋತ್ಸವ ಆಚರಣೆ ಮಾಡುತ್ತಿರುವುದು ಶ್ಲಾಘನೀಯ. ಪ್ರತಿವರ್ಷ ಇಂತಹ ಕಾರ್ಯಕ್ರಮಗಳ ಆಯೋಜನೆ ಮಾಡಿ, ಸ್ವಾತಂತ್ರ್ಯ ಹೋರಾಟಗಾರರನ್ನು ನೆನೆಪಿಸುವ ಜೊತೆಗೆ, ಸಮಾಜ ಮಕ್ಕಳ, ಉನ್ನತ ಶಿಕ್ಷಣ, ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮ ಆಯೋಜನೆ ಮಾಡಬೇಕು ಎಂದರು.
ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಮಾತನಾಡಿ, ಹಾಲುಮತ ಸಮಾಜದ ಹೆಮ್ಮೆಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ಸಮಾಜ ಬಾಂಧವರು ನಿಲ್ಲಬೇಕು. ಸಿದ್ದರಾಮಯ್ಯನವರನ್ನು ಕಳೆದುಕೊಂಡರೆ ಅಂತಹ ರಾಜಕಾರಣಿ ದೊರೆಯಲು ಸಾಧ್ಯವಿಲ್ಲ ಎಂದರು.
ಹಾಲು ಮತ ಸಮಾಜದ ಮಾಜಿ ರಾಜ್ಯಾಧ್ಯಕ್ಷ ರಾಜೇಂದ್ರ ಸಣ್ಣಕ್ಕಿ ಮಾತನಾಡಿ, ಹಾಲುಮತ ಸಮಾಜದವರು ನಂಬಿಕೆಗೆ ಅರ್ಹರು, ಸಮಾಜ ಬಾಂಧವರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಜೊತೆಗೆ ಸಂಘಟಿತರಾದಲ್ಲಿ ಮಾತ್ರ ಒಗ್ಗಟ್ಟಿನಿಂದ ನಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಿದೆ.
ಅಧ್ಯಕ್ಷತೆ ವಹಿಸಿದ್ದ ಹಾಲುಮತ ಸಮಾಜದ ತಾಲೂಕಾಧ್ಯಕ್ಷ ಪಡಿಯಪ್ಪ ಕ್ವಾರಿ ಮಾತನಾಡಿದರು. ನಿಕೇತರಾಜ ಮೌರ್ಯ, ಸಂಗೊಳ್ಳಿ ರಾಯಣ್ಣನವರ ಜೀವನ ಹಾಗೂ ಸಾಧನೆಗಳ ಕುರಿತು ಉಪನ್ಯಾಸ ನೀಡಿದರು.
ಸಾನಿಧ್ಯ ವಹಿಸಿದ್ದ ಬೆಂಗಳೂರಿನ ಶ್ರೀ ಯೋಗೇಶ್ವರಾನಂದ ಸ್ವಾಮೀಜಿ, ಲಖನಾಯ್ಕನಕೊಪ್ಪದ ಶ್ರೀ ಕೃಷ್ಣಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಪರುತಗೌಡ ಪಾಟೀಲ, ಲಿಂಗಾಯತ ಪಂಚಮಸಾಲಿ ತಾಲೂಕಾಧ್ಯಕ್ಷ ಸಿ.ಬಿ. ಪಾಟೀಲ, ಸಮಾಜ ಸೇವಕ ಪಿ.ಎಫ್. ಪಾಟೀಲ, ದಲಿತ-ಅಲ್ಪ ಸಂಖ್ಯಾತ ಹಿಂದುಳಿದ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ, ರಾಜ್ಯ ಸಂಘದ ಕಾರ್ಯಾಧ್ಯಕ್ಷ ಬಸವರಾಜ ಬಸಳಿಗುದ್ದಿ, ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ, ಡಾ.ಕೆ.ವಿ. ಪಾಟೀಲ, ಪ್ರಭುಯತ್ನಟ್ಟಿ, ಹೈಕೋರ್ಟ ನ್ಯಾಯವಾದಿ ಅನಂತನಾಯಕ ಎನ್, ಪುರಸಭೆ ಅಧ್ಯಕ್ಷೆ ಲಕ್ಷ್ಮೀ ಕಡಕೋಳ, ಮಾಜಿ ಜಿ.ಪಂ ಅಧ್ಯಕ್ಷೆ ಮಹಾದೇವಿ ರೊಟ್ಟಿ, ಸಮಾಜದ ಮುಖಂಡರಾದ ಅಶೋಕ ಮೆಟಗುಡ್ಡ, ಕೆಂಪಣ್ಣ ಕ್ವಾರಿ, ಬಸವರಾಜ ಸೋಮಗೊಂಡ, ಈರಣ್ಣ ಕಾಮನ್ನವರ, ಫಕೀರಪ್ಪ ಕೊಂಗವಾಡ, ಸಿದ್ದು ಮೋಟೆ, ಹಣಮಂತ ಕಿತ್ತೂರ ಉಪಸ್ಥಿತರಿದ್ದರು.
ನಿವೃತ್ತ ಪ್ರಾಚಾರ್ಯ ಬಿ.ಎಂ.ಜಂತ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಾಲುಮತ ಸಮಾಜದ ಕಾರ್ಯದರ್ಶಿ ಸಿದ್ದಪ್ಪ ಮಕ್ಕನ್ನವರ ಸ್ವಾಗತಿಸಿದರು. ಅಪ್ಪಣ್ಣ ವರಗನ್ನವರ ನಿರೂಪಿಸಿ, ವಂದಿಸಿದರು.