ರಾಮದುರ್ಗ: ತಾಲೂಕಿನ ಕೆ ಚಂದರಗಿ ಗ್ರಾ.ಪಂ ವ್ಯಾಪ್ತಿಯ ಎಂ.ಚಂದರಗಿ, ಗುದುಗೊಪ್ಪ, ಹಾಗೂ ಹಿರೇಕೊಪ್ಪ ಕೆ.ಎಸ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕೊಪ್ಪ ಕೆ.ಎಸ್, ಬಾಗೋಜಿಕೊಪ್ಪ, ಹಾಗೂ ಹುಲಕುಂದ ಗ್ರಾಮ ಪಂಚಾಯತಿಗಳಿಗೆ ಜಿ.ಪಂ ಸಿಇಒ ರಾಹುಲ್ ಶಿಂಧೆ ಅವರು ಭೇಟಿ ನೀಡಿ, ಜಲ ಜೀವನ ಮಿಷನ್ ಯೋಜನೆಯ ಕಾಮಗಾರಿಗಳನ್ನು ಪರಿಶೀಲಿಸಿದರು.
ಮನೆ ಮನೆಗೆ ಅಳವಡಿಸಲಾಗಿರುವ ನಳ ಸಂಪರ್ಕದ ಬಗ್ಗೆ ಸ್ಥಳೀಯ ಫಲಾನುಭವಿಗಳೊಂದಿಗೆ ಚರ್ಚೆಮಾಡಿ ಕಾರ್ಯಾತ್ಮಕ ನಳ ಸಂಪರ್ಕ ಬಗ್ಗೆ ಮಾಹಿತಿ ಪಡೆದುಕೊಂಡು ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಚರ್ಚೆ ಮಾಡಿದರು.
ನಂತರ ಮಾತನಾಡಿದ ಅವರು, ಗ್ರಾಮದಲ್ಲಿನ ಕುಡಿಯುವ ನೀರಿನ ಮೂಲಗಳ ಸ್ವಚ್ಛತೆಗೆ ಹೆಚ್ಚಿನ ಗಮನ ನೀಡಬೇಕೆಂದು ತಿಳಿಸಿ, ನೀರಿನ ಟ್ಯಾಂಕಗಳ ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ವಹಿಸಿ ಹಾಗೂ ಜಲ ಜೀವನ ಮಿಷನ್ ಯೋಜನೆಯಡಿ ಬಾಕಿ ಉಳಿದ ಗ್ರಾಮಗಳ ಕಾಮಗಾರಿಗಳನ್ನು ಅತೀ ಶೀಘ್ರದಲ್ಲಿ ಪೂರ್ಣಗೊಳಿಸಿ ಜನರಿಗೆ ನಳ ಸಂಪರ್ಕ ಒದಗಿಸಿ ನೀರು ಕೊಡಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಕಿರಣ ಗೋರ್ಪಡೆ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪುರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಶ್ರೀನಿವಾಸ ವಿಶ್ವಕರ್ಮ, ತಾ.ಪಂ ಎಡಿ ಎ.ಎಸ್. ಕುಂಬಾರ, ತಾಲ್ಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯತ ಅಧ್ಯಕ್ಷರು, ಸದಸ್ಯರು, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ವಿವಿಧ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಜಿ.ಪಂ ಸಿಇಒ ರಿಂದ ಜಲ ಜೀವನ ಮಿಷನ್ ಯೋಜನೆಯ ಕಾಮಗಾರಿ ಪರಿಶೀಲನೆ
