ಖೊಟ್ಟಿ ಸಹಿ ಮಾಡಿ ಗ್ರಾ.ಪಂ ಖಾತೆಯಿಂದ ಲಕ್ಷಾಂತರ ಹಣ ದುರುಪಯೋಗ : ಪ್ರಕರಣ ದಾಖಲು

Pratibha Boi
ಖೊಟ್ಟಿ ಸಹಿ ಮಾಡಿ ಗ್ರಾ.ಪಂ ಖಾತೆಯಿಂದ ಲಕ್ಷಾಂತರ ಹಣ ದುರುಪಯೋಗ : ಪ್ರಕರಣ ದಾಖಲು
oplus_0
WhatsApp Group Join Now
Telegram Group Join Now

ರಾಮದುರ್ಗ: ಗ್ರಾಮ ಅಧ್ಯಕ್ಷರ ಹಾಗೂ ಅಭಿವೃದ್ದಿಯ ಅಧಿಕಾರಿಯ ಸಹಿಯನ್ನು ಗ್ರಾ.ಪಂ ಸದಸ್ಯರೊಬ್ಬರು ಖೊಟ್ಟಿ ಮಾಡಿ ಗ್ರಾ.ಪಂ ಖಾತೆಯಿಂದ ಲಕ್ಷಾಂತರ ಹಣ ದುರುಪಯೋಗ ಪಡೆಸಿಕೊಂಡಿರುವ ಘಟನೆ ತಾಲೂಕಿನ ಕಟಕೋಳ ಗ್ರಾ. ಪಂ ಯಲ್ಲಿ ನಡೆದಿದ್ದು, ಈ ಕುರಿತು ಕಟಕೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಕಟಕೋಳ ಗ್ರಾ.ಪಂ ಸದಸ್ಯ ಶ್ರೀಕಾಂತ ಫಕೀರಪ್ಪ ಕೊರವರ ಎಂಬುವರು ಅಧ್ಯಕ್ಷರ ಮತ್ತು ಅಭಿವೃದ್ದಿ ಅಧಿಕಾರಿಯ ಖೊಟ್ಟಿ ಸಹಿಗಳನ್ನು ಮಾಡಿ ಸುಮಾರು ೩೧,೮೪,೬೯೪ ರೂ. ಹಣವನ್ನು ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ ಕಟಕೋಳ ಶಾಖೆಯಿಂದ ಡ್ರಾ ಮಾಡಿಕೊಂಡಿದ್ದಾರೆ.
ಕಟಕೋಳ ಗ್ರಾಮ ಪಂಚಾಯ್ತಿ ಗ್ರಾಮ ವಿಕಾಸ ಯೋಜನೆಯ ಖಾತೆ ಸಂಖ್ಯೆ ೮೯೦೬೮೯೦೩೫೦೪ ಈ ಖಾತೆಯ ಚೆಕ್‌ಬುಕ್, ಕ್ಯಾಶಬುಕ್ ಸೇರಿದ ಎಲ್ಲವುಗಳನ್ನು ನೋಡಿಕೊಳ್ಳುತ್ತಿದ್ದ ಡಾಟಾ ಎಂಟ್ರಿ ಆಫರೇಟರ್ ಮತ್ತು ವಾಟರ್‌ಮನ್ ಸಹಾಯದಿಂದ ಪಂಚಾಯತಿ ಸದಸ್ಯ ಶ್ರೀಕಾಂತ ಫಕೀರಪ್ಪ ಕೊರವರ ಹಣವನ್ನು ಲಪಾಟಿಯಿಸಿದ್ದಾರೆ ಎಂದು ಪೊಲೀಸ್ ಠಾಣೆಗೆ ಅಭಿವೃದ್ದಿ ಅಧಿಕಾರಿ ಮಲ್ಲಿಕಾರ್ಜುನ ಬೈಲವಾಡ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಕಟಕೋಳ ಕೆ.ವಿ.ಜಿ ಬ್ಯಾಂಕಿನ ಪಂಚಾಯತಿ ಖಾತೆಯ ೧೨ ಚೆಕ್‌ಗಳಿಂದ ಬೃಹತ್ ಮೊತ್ತದ ಹಣ ಡ್ರಾ ಆಗಿದೆ. ಕಳೆದ ಸೆಪ್ಟೆಂಬರ ೧೮ ರಿಂದ ಅಕ್ಟೋಬರ ೭ ರ ವರೆಗೆ ಬೇರೆ ಬೇರೆ ಹೆಸರಿನಲ್ಲಿ ಸುಮಾರು ೧೨ ಭಾರಿ ಹಣವನ್ನು ತೆಗೆಯಲಾಗಿದೆ. ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಪಿಡಿಓ ಜಂಟಿ ನಿರ್ವಹಣೆಯ ಖಾತೆಯಾದರೂ ಬ್ಯಾಂಕ್ ಸಿಬ್ಬಂದಿ ಹಣ ಡ್ರಾ ಮಾಡುವಾಗ ಮಾದರಿ ಸಹಿಗಳನ್ನು ಪರಿಶೀಲನೆ ಮಾಡದೇ ಹಣ ಕೊಟ್ಟಿರುವುದು ಕೂಡ ಸಂಶಯಕ್ಕೆ ಕಾರಣವಾಗಿದೆ.
ಈ ಬಗ್ಗೆ ಕಟಕೋಳ ಪೊಲೀಸ್ ಠಾಣೆಯಲ್ಲಿ ಪಿಡಿಓ ಮಲ್ಲಿಕಾರ್ಜುನ ಬೈಲವಾಡ ಅವರು ಪಂಚಾಯತಿ ಸದಸ್ಯ ಶ್ರೀಕಾಂತ ಕೊರವರ, ವಾಟರ್‌ಮನ್ ಹನಮಂತ ಮಹಾದೇವ ಭಜಂತ್ರಿ, ಡಾಟಾ ಎಂಟ್ರಿ ಆಫರೇಟರ್ ಶ್ರೀಶೈಲ್ ದುಂಡಪ್ಪ ಮುಗಳಿ ಮತ್ತು ಕಟಕೋಳ ಕೆವಿಜಿ ಬ್ಯಾಂಕ್ ಮ್ಯಾನೇಜರ್ ವಿರುದ್ಧ ದೂರು ನೀಡಿದ್ದಾರೆ.
ಪ್ರಕರಣ ಬೆಳಕಿಗೆ ಬಂದ ಬಗೆ:
ಏಪ್ರೀಲ್ ಮೊದಲ ವಾರದಲ್ಲಿ ತಾಲೂಕಾ ಪಂಚಾಯತಿಗೆ ಮಾಹಿತಿ ನೀಡುವ ಸಲುವಾಗಿ ಪಿಡಿಓ ಡಾಟಾ ಎಂಟ್ರಿ ಆಫರೇಟರ್‌ಗೆ ಗ್ರಾಮ ವಿಕಾಸ ಯೋಜನೆ ಖಾತೆಯ ಮಾಹಿತಿ ಕೇಳಿದಾಗ ಇಲ್ಲಸಲ್ಲದ ನೆಪ ಹೇಳಿ ನುಣಚಿಕೊಂಡಿದ್ದರು. ಬ್ಯಾಂಕ್‌ಗೆ ಪಾಸ್‌ಬುಕ್ ಪ್ರಿಂಟ್ ಮಾಡಿಸಲು ಹೇಳಿದರೆ ಬ್ಯಾಂಕ್ ಪ್ರಿಂಟರ್ ದುರಸ್ತಿಯಲ್ಲಿದೆ ಎಂದು ಸುಳ್ಳು ಹೇಳಿದ್ದರು. ಕೊನೆಗೆ ಬ್ಯಾಂಕ್ ಸ್ಟೇಟ್‌ಮೆಂಟ್ ತೆಗೆದಾಗ ರೂ.೩೧.೮೪ ಲಕ್ಷಕ್ಕೂ ಅಧಿಕ ಹಣವನ್ನು ಬೇರೆ ಬೇರೆ ಹೆಸರಿನಲ್ಲಿ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಹಣ ಡ್ರಾ ಆಗಿರುವದು ಬೆಳಕಿಗೆ ಬಂದಿದೆ. ಈ ಕುರಿತು ವಿಚಾರಿಸಿದಾಗ ಪಂಚಾಯತಿ ಸದಸ್ಯ ಶ್ರೀಕಾಂತ ಕೊರವರ ಹೆಸರು ಕೇಳಿ ಬಂದಿದೆ.
ರಾಜಿ ಪಂಚಾಯ್ತಿ:
ಗ್ರಾಮ ಪಂಚಾಯತ ಅಧ್ಯಕ್ಷರು ಮತ್ತು ಸದಸ್ಯರು ಏಪ್ರೀಲ್ ೨೫ ರಂದು ಸಭೆ ಸೇರಿ ವಿಷಯ ದೊಡ್ಡದು ಮಾಡುವುದು ಬೇಡ ಎಂದು ಶ್ರೀಕಾಂತ ಕೊರವರ ಕರೆಸಿ ವಿಚಾರಣೆ ಮಾಡಿದಾಗ ಪಿಡಿಒ ಮತ್ತು ಅಧ್ಯಕ್ಷರಿಗೆ ಗೊತ್ತಾಗದಂತೆ ನಾನೇ ಹಣ ತೆಗೆದುಕೊಂಡಿದ್ದೇನೆ. ಮುಂದಿನ ಮೂರು ತಿಂಗಳೊಳಗಾಗಿ ಹಣ ಕೊಡುವುದಾಗಿ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟಿದ್ದಾರೆ. ಅದರಂತೆ ಇಲ್ಲಿಯ ವರೆಗೆ ೨೬.೯೦ ಲಕ್ಷ ರೂ. ಹಣವನ್ನು ಪಂಚಾಯತಿ ಬ್ಯಾಂಕ ಖಾತೆಗೆ ಮರಳಿ ಜಮಾ ಮಾಡಿದ್ದಾನೆ. ಬಾಕಿ ಹಣ ನೀಡದಿರುವುದಕ್ಕೆ ಈ ಪ್ರಕರಣ ಬೆಳಕಿಗೆ ಬಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಈ ಪಕ್ರರಣದಲ್ಲಿ ಮತ್ಯಾರ್‍ಯಾರು ಭಾಗಿಯಾಗಿದ್ದಾರೆ ಎಂಬುದು ತನಿಖೆಯ ನಂತರ ಗೊತ್ತಾಗಲಿದೆ.

WhatsApp Group Join Now
Telegram Group Join Now
Share This Article