ಬೆಳಗಾವಿಯ ಕನ್ನಡ ಭವನದಲ್ಲಿ ವೀರರಾಣಿ ಕಿತ್ತೂರ ಚನ್ನಮ್ಮಳ ೨೪೭ನೇ ಜನ್ಮದಿನೋದತ್ಸವ ಹಾಗೂ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು. ದಿವ್ಯಸಾನ್ನಿಧ್ಯವನ್ನು ಕಿತ್ತೂರು ರಾಜಗುರು ಕಲ್ಮಠದ ಪೂಜ್ಯ ಮಡಿವಾಳ ಮಹಾಸ್ವಾಮಿಗಳು ವಹಿಸಿದ್ದರು. ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಡಾ.ಬಸವರಾಜ ಜಗಜಂಪಿಯವರು ವಹಿಸಿದ್ದರು. ಅವರು ಮಾತನಾಡಿ ಕನ್ನಡ ನಾಡಿನ ಬೆಳ್ಳಿಚುಕ್ಕಿ ಚನ್ನಮ್ಮ ಭಾರತ ಸ್ವಾತಂತ್ರ್ಯ ಚಳುವಳಿಯ ಮೊದಲ ಹೋರಾಟಗಾರ್ತಿ. ಅವಳ ಕೊಡುಗೆ ಅನನ್ಯ. ನಾಡು ದೇಶ ಇಂಥ ವೀರಮಹಿಳೆಯನ್ನು ಅರಿಯಬೇಕೆಂದು ಹೇಳಿದರು. ರಾಣಿ ಚೆನ್ನಮ್ಮ ವಿವಿ ಕುಲಸಚಿವ ಡಾ.ಸಂತೋಷ ಕಾಮಗೌಡರ ಸಮಾರಂಭವನ್ನು ಉದ್ಘಾಟಿಸಿ ಕನ್ನಡ ನಾಡು ನುಡಿ ಅತ್ಯಂತ ಪ್ರಾಚೀನ. ನಮ್ಮ ಭಾಷೆ ಹಾಗೂ ಸಂಸ್ಕೃತಿಯನ್ನು ಪ್ರೀತಿಸಬೇಕು. ಕನ್ನಡವನ್ನು ನಾವು ಪ್ರೀತಿಸದೇ ಮತ್ತಾರೂ ಪ್ರೀತಿಸಲಾರರು. ಚನ್ನಮ್ಮಾಜಿ ಕೊಡುಗೆ ಅನನ್ಯವೆಂದು ಬಣ್ಣೀಸಿದರು. ಪ್ರಾಧ್ಯಾಪಕ ಡಾ.ಎಸ್.ಎಂ. ಗಂಗಾಧರಯ್ಯ ಚನ್ನಮ್ಮ ಕುರಿತು ಉಪನ್ಯಾಸ ನೀಡಿದರು. ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡಾ.ಸಿದ್ಧು ಹುಲ್ಲೋಳ್ಳಿ , ಕನ್ನಡ ಸಾಹಿತ್ಯ ಪರಿಷತ್ತ ಜಿಲ್ಲಾ ಅಧ್ಯಕ್ಷೆ ಮಂಗಳಾ ಮೆಟಗುಡ್ಡ ಈ ಸಂದರ್ಭದಲ್ಲಿ ಮಾತನಾಡಿದರು. ಕನ್ನಡ ಭವನದ ಕಾರ್ಯಾದರ್ಶಿ ಯ.ರು.ಪಾಟೀಲ ಆಶಯ ನುಡಿಗಳನಾಡಿದರು. ಬಸವರಾಜ ಗಾರ್ಗಿ ಸ್ವಾಗತಿಸಿದರು. ಡಾ.ಬಸವರಾಜ ಕುಪ್ಪಸಗೌಡರ ನಿರೂಪಿಸಿದರು. ರಾಜೇಶ್ವರಿ ಹಿರೇಮಠ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ವೇದಿಕೆ ಮೇಲೆ ಸುಧೀರ ಕುಲಕರ್ಣಿ, ರತ್ನಪ್ರಭಾ ಬೆಲ್ಲದ ಮೊದಲಾದವರು ಉಪಸ್ಥಿತರಿದ್ದರು.


