ಅಮೃತಸರ (ಪಂಜಾಬ್): ಜಿಲ್ಲೆಯ ಮಜಿತ ಕ್ಷೇತ್ರದಿಂದ ಬೆಳ್ಳಂಬೆಳಗ್ಗ ದುರಂತ ಸುದ್ದಿಯೊಂದು ಕೇಳಿ ಬಂದಿದೆ. ಮಜಿತಾದ ಮೂರಕ್ಕೂ ಹೆಚ್ಚು ಗ್ರಾಮಗಳಲ್ಲಿ ವಿಷಪೂರಿತ ಮದ್ಯ ಸೇವಿಸಿ 23 ಜನರು ಸಾವನ್ನಪ್ಪಿದ್ದಾರೆ.
ನಿನ್ನೆ ರಾತ್ರಿಯಿಂದಲೇ ಸಾವುಗಳು ಸಂಭವಿಸುತ್ತಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ವಿಷಪೂರಿತ ಮದ್ಯ ಸೇವಿಸಿದವರ ಆರೋಗ್ಯ ಹದಗೆಟ್ಟ ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಸ್ಥಳದಲ್ಲಿ ಪೊಲೀಸ್ ಆಡಳಿತ ಮತ್ತು ಜಿಲ್ಲಾಧಿಕಾರಿ ಸಾಕ್ಷಿ ಸಾಹ್ನಿ ಬೀಡುಬಿಟ್ಟಿದ್ದಾರೆ.
ಮೂರು ಗ್ರಾಮಗಳಲ್ಲಿ ಶೋಕಾಚರಣೆ: ಮಜಿತಾ ಕ್ಷೇತ್ರದ ಸುಮಾರು ಮೂರು ಹಳ್ಳಿಗಳಲ್ಲಿ ವಿಷಪೂರಿತ ಮದ್ಯ ಸೇವಿಸಿ 23 ಜನರು ಸಾವನ್ನಪ್ಪಿದ್ದಾರೆ. ಹಲವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಬಗ್ಗೆ ತಿಳಿದುಬಂದ ಕೂಡಲೇ ಮದ್ಯ ಸೇವಿಸಿದ ಮತ್ತು ಅನಾರೋಗ್ಯದಿಂದ ಬಳಲುತ್ತಿರುವವರನ್ನು ಚಿಕಿತ್ಸೆಗೆ ಕಳುಹಿಸಬೇಕು ಎಂದು ಗುರುದ್ವಾರಗಳಲ್ಲಿ ಘೋಷಣೆಗಳನ್ನು ಮಾಡಲಾಯಿತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಥಾರ್ಯೇವಾಲ್, ಮರಾರಿ ಮತ್ತು ಭಂಗಲಿ ಗ್ರಾಮಗಳಲ್ಲಿ ವಿಷಪೂರಿತ ಮದ್ಯ ಸೇವಿಸಿ ಹಲವು ಜನರು ಸಾವನ್ನಪ್ಪಿದ್ದಾರೆ. ಗಂಭೀರ ಸ್ಥಿತಿಯಲ್ಲಿರುವವರು ಮಾತನಾಡಲು ಸಹ ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ. ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ವಿಷಪೂರಿತ ಮದ್ಯ ಸೇವಿಸಿ ಜನರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ ಎಂದು ಪೊಲೀಸ್ ಅಧಿಕಾರಿ ಮಣಿಂದರ್ ಸಿಂಗ್ ತಿಳಿಸಿದ್ದಾರೆ.