ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಿಂಚಣಿ ಗ್ರಾಮದ ರಾಕೇಶ್ ಯಡುರೆ (19) ಹಣ ಕಳೆದುಕೊಂಡ ಕ್ರಿಕೆಟಿಗ. ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಡುತ್ತಿದ್ದ ರಾಕೇಶಗೂ ಎಲ್ಲರಂತೆ ಐಪಿಎಲ್ ಆಡಬೇಕೆಂಬ ಮಹದಾಸೆಯಿತ್ತು. ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯವೊಂದರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಬಂದಿದ್ದ. ಬಳಿಕ ರೈಸಿಂಗ್ ಭಾರತ್ ಕ್ರಿಕೆಟ್ ಲಿಗ್ ಟೂರ್ನಿಯ ಆಯ್ಕೆಯ ಟ್ರೈಯಲ್ನಲ್ಲಿ ಭಾಗಿಯಾಗಿದ್ದ. ಆಗ ನಡೆದ ಪಂದ್ಯಾವಳಿ ಸಂದರ್ಭದಲ್ಲಿ ಕ್ರಿಕೆಟ್ ಸಮಿತಿ ಆಯ್ಕೆಗಾರರು ಬಂದಿದ್ದರು ಎನ್ನಲಾಗಿದೆ. ಚೆನ್ನಾಗಿಯೇ ಆಡಿ ಮನೆಗೆ ಬಂದಿದ್ದ ರಾಕೇಶನಿಗೆ ನಾಲ್ಕು ತಿಂಗಳ ಬಳಿಕ ಇನ್ಸ್ಟಾಗ್ರಾಂನಲ್ಲಿ ಬಂದ ಸಂದೇಶವೇ ಮುಳುವಾಗಿದೆ. ಐಪಿಎಲ್ ಟೂರ್ನಿಯಲ್ಲಿ ಕ್ರಿಕೆಟ್ ಆಡಬೇಕೆಂದು ಆಸೆ ಹೊತ್ತ ಯುವ ಕ್ರಿಕೆಟರ್ ಈಗ ಇನಸ್ಟಾಗ್ರಾಮ್ನಲ್ಲಿ ಬಂದ ಒಂದೇ ಒಂದು ಮೆಸೇಜ್ನಿಂದಾಗಿ 23ಲಕ್ಷ ರೂಪಾಯಿ ಹಣ ಕಳೆದುಕೊಂಡಿದ್ದಾನೆ.
ಇನ್ಸ್ಟಾಗ್ರಾಂನಲ್ಲಿ (Sushant_srivastava1) ಎಂಬ ಹೆಸರಿನ ಅಕೌಂಟ್ನಿಂದ ಒಂದು ಸಂದೇಶ ಬಂದಿರುತ್ತದೆ. ಅದರಲ್ಲಿ, ‘‘ನಿಮ್ಮನ್ನು ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸೇರಿಸಿಕೊಳ್ಳುತ್ತೇವೆ. ಇದೊಂದು ಅಪ್ಲಿಕೇಶನ್ ಫಾರ್ಮ್ ತುಂಬಿ 2 ಸಾವಿರ ರೂಪಾಯಿ ಕಳುಹಿಸಿ’’ ಎಂದು ಉಲ್ಲೇಖಿಸಿರುತ್ತದೆ. ಇನ್ಸ್ಟಾದಲ್ಲಿ ಬಂದಿರುವ ಮೆಸೇಜ್ ನಂಬಿದ್ದ ರಾಕೇಶ್ ಆರಂಭದಲ್ಲಿ ಹಣ ವರ್ಗಾವಣೆ ಮಾಡಿದ್ದಾರೆ.
ವಂಚನೆಗೆ ಒಳಗಾದ ಉದಯೋನ್ಮುಖ ಕ್ರಿಕೆಟಿಗನ ಕುಟುಂಬ ಬೀದಿಗೆ ಬಂದಿದ್ದು, ಹಣವೂ ಇಲ್ಲ ಅವಕಾಶವೂ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೇಸ್ ದಾಖಲಿಸಿಕೊಂಡ ಸೈಬರ್ ಕ್ರೈಂ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.